ಬೆಂಗಳೂರು, ಮಾ.22 (DaijiworldNews/PY): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ದ ಟೀಕೆ ಮಾಡಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಿದ ಬಿಜೆಪಿ, "ರಾಜ್ಯದ ಜನತೆಗೆ ಮಹಾನಾಯಕನ ಮೇಲೆ ಅನುಮಾನವಿದೆ. ಹಾಗಾದರೆ ಸಂತ್ರಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು, ಮಹಾನಾಯಕರೇ?" ಎಂದು ಕೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಆ ಪ್ರಕರಣದ ಪಾತ್ರಧಾರಿಗಳ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಸದನದಲ್ಲಿ ಪ್ರಶ್ನೆ ಎತ್ತಿದ್ದಾರೆ. ಈ ಘಟನೆಯ ನಿರ್ಮಾಪಕ, ನಿರ್ದೇಶಕ, ಹಂಚಿಕೆದಾರ ಯಾರು ಎಂದು ಜನ ಕೇಳುತ್ತಿದ್ದಾರೆ. ರಾಜ್ಯದ ಜನತೆಗೆ ಮಹಾನಾಯಕನ ಮೇಲೆ ಅನುಮಾನವಿದೆ. ಹಾಗಾದರೆ ಸಂತ್ರಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು, ಮಹಾನಾಯಕರೇ?" ಎಂದು ಪ್ರಶ್ನಿಸಿದೆ.
"ಸಿಡಿಯಲ್ಲಿರುವ ಯುವತಿ,ಅಸಹಾಯಕಳು, ನನಗೆ ಬೆದರಿಕೆ ಇದೆ, ಉದ್ಯೋಗ ಕೊಡುಸುವುದಾಗಿ ಹೇಳಿ ನನ್ನ ದುರ್ಬಳಕೆ ಮಾಡಿಕೊಳ್ಳಲಾಯಿತು, ನನಗೆ ರಕ್ಷಣೆ ಬೇಕು ಎಂದು ಬೇಡಿಕೊಂಡರೂ ಈ ಸರ್ಕಾರ ಯುವತಿಯ ಆಯಾಮದಲ್ಲಿ ತನಿಖೆ ನಡೆಸುತ್ತಿಲ್ಲ. ರಕ್ಷಣೆ ನೀಡುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ. ಹಾಗೆಯೇ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಆರ್ತನಾದಕ್ಕೆ ಬೆಲೆಯೇ ಇಲ್ಲ" ಎಂದು ಕಾಂಗ್ರೆಸ್ ಬಿಜೆಪಿಗೆ ಟೀಕೆ ಮಾಡಿತ್ತು.