ಕೊಚ್ಚಿ, ಮಾ.22 (DaijiworldNews/PY): "ಸರ್ಕಾರವನ್ನು ನಡೆಸುವ ಉದ್ದೇಶದಿಂದ ಜನಸಾಮಾನ್ಯರ ಜೇಬಿನಿಂದ ಬಲವಂತವಾಗಿ ಹಣ ದೋಚಲಾಗುತ್ತಿದೆ" ಎಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸೇಂಟ್ ತೆರೇಸಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳ ಜೊತೆ ಸಂವಾದ ನಡೆಸಿದ ಅವರು, "ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹೊರತಾಗಿ ಕೂಡಾ ಇಂಧನ ಬೆಲೆ ಏರಿಕೆ ಮಾಡಲಾಗುತ್ತದೆ. ಮತ್ತಷ್ಟು ಕಾಲ ಈ ಸಮಸ್ಯೆ ಮುಂದುವರಿಯಲಿದೆ" ಎಂದಿದ್ದಾರೆ.
"ಈ ರೀತಿಯಾದ ಬಿಕ್ಕಟ್ಟಿನಿಂದ ಹೊರಬರಲು ಜನರಿಗೆ ಹಣ ಹಣಸ ಅವಶ್ಯಕತೆ ಇದೆ. ಆದರೆ, ಸರ್ಕಾರ ಜನರ ಸಮಸ್ಯೆಯತ್ತ ಗಮನಹರಿಸುತ್ತಿಲ್ಲ" ಎಂದು ಆರೋಪಿಸಿದ್ದಾರೆ.
"ನೋಟುಗಳ ಅಮಾನ್ಯೀಕರಣ ಸೇರಿದಂತೆ ಜಿಎಸ್ಟಿ ಕಾರಣದಿಂದ ಆರ್ಥಿಕತೆ ಹಾನಿಯಾಯಿತು. ಕೊರೊನಾ ಕಾರಣದಿಂದ ಆರ್ಥಿಕತೆ ಮತ್ತಷ್ಟು ಕುಸಿಯಿತು" ಎಂದಿದ್ದಾರೆ.
"ಆರ್ಥಿಕತೆ ನಿಂತ ಕಾರಣ ಈಗ ಸರ್ಕಾರದ ಬಳಿ ಹಣ ಇಲ್ಲ. ಅವರಿಗೆ ತೆರಿಗೆಯಿಂದ ಕೂಡಾ ಹಣ ಸಂಗ್ರಹ ಮಾಡಲು ಆಗುತ್ತಿಲ್ಲ. ಆದ ಕಾರಣ ಸರ್ಕಾರವನ್ನು ನಡೆಸಲು ಇಂಧನ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೇಬಿನಿಂದ ಬಲವಂತವಾಗಿ ಹಣ ದೋಚುತ್ತಿದ್ದಾರೆ" ಎಂದು ದೂರಿದ್ದಾರೆ.
"ಆರ್ಥಿಕತೆಯು ಸರಾಗವಾಗಿ ಮುಂದುವರೆಯಲು ಸಾಮರಸ್ಯದ ವಾತಾವರಣ ಮುಖ್ಯ. ಆದರೆ, ಅಲ್ಲಿಯೇ ಸಮಸ್ಯೆ ಉಂಟಾಗಿದೆ" ಎಂದಿದ್ದಾರೆ.