ಲಕ್ನೋ, ಮಾ.22 (DaijiworldNews/MB) : ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
5,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಯ ಪ್ರಸ್ತಾಪ ಮಾಡಲಾಗಿದ್ದು, 2022 ರ ವೇಳೆಗೆ ವಿಶ್ವವಿದ್ಯಾಲಯವು ಬರಲಿದೆ.
ಪ್ರಸ್ತಾವಿತ ವಿಶ್ವವಿದ್ಯಾನಿಲಯವು ವೈದಿಕ ಗಣಿತ (ಗಣಿತದ ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳು / ಸೂತ್ರಗಳ ಸಂಗ್ರಹ), ಜ್ಯೋತಿಷ ಕೇಂದ್ರ, ಕರ್ಮ ಖಂಡ (ಪಂಡಿತರು ನಡೆಸುವ ಧಾರ್ಮಿಕ ಸೇವೆಗಳು) ಮತ್ತು ಗೀತೆ, ವೈದಿಕ ಮತ್ತು ರಾಮಾಯಣ ಸೇರಿದಂತೆ ಇತರ ಧಾರ್ಮಿಕ ಗ್ರಂಥಗಳ ಬಗ್ಗೆ ಸಂಶೋಧನೆ ಹೊಂದಿರುತ್ತದೆ.
"ಅಯೋಧ್ಯೆಯಲ್ಲಿ 50 ಎಕರೆ ಭೂಮಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಆ ವ್ಯಕ್ತಿ ಪ್ರಸ್ತಾಪಿಸಿದರು. ಇದನ್ನು ಜಿಲ್ಲಾಧಿಕಾರಿ ತೆರವುಗೊಳಿಸಿದ್ದಾರೆ. ರಾಜ್ಯ ವಿಶ್ವವಿದ್ಯಾಲಯಗಳ ಸಮಿತಿಯೂ ಸಹ ಅದರ ಪರವಾಗಿ ವರದಿಯನ್ನು ನೀಡಿದೆ. ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ವಿಶ್ವವಿದ್ಯಾಲಯವು ಶೀಘ್ರದಲ್ಲೇ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
''ಈ ವಿಶ್ವವಿದ್ಯಾನಿಲಯ ಧಾರ್ಮಿಕ ಗ್ರಂಥಗಳ ಸಂಶೋಧನೆಗೆ ಒಂದು ದೊಡ್ಡ ಸಂಸ್ಥೆಯಾಗಲಿದೆ'' ಎಂದು ಅವರು ಅಭಿಪ್ರಾಯಪಟ್ಟರು.
''ಪ್ರಾಚೀನ ಮತ್ತು ಸಾಂಪ್ರದಾಯಿಕ ಜ್ಞಾನದ ನಿಧಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಯುವಕರಲ್ಲಿ ಸಂಸ್ಕೃತಿಯನ್ನು ಬಲಪಡಿಸುವುದು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಉದ್ದೇಶವಾಗಿದೆ'' ಎಂದೂ ಹೇಳಿದರು.
"ಈಗ ಭಾರತೀಯ ಭಾಷೆ, ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ತಿಳಿದಿರುವ ಅನೇಕ ದೇಶಗಳು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಯೋಗದ ಮೂಲಕ ಭಾರತದೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿವೆ. ಆದ್ದರಿಂದ ಆಕರ್ಷಣೆಯನ್ನು ಬೆಳೆಸಲು ಇಂತಹ ವಿಷಯಗಳನ್ನು ಮುನ್ನೆಲೆಗೆ ತರುವ ಅವಶ್ಯಕತೆಯಿದೆ" ಎಂದು ಶರ್ಮಾ ಹೇಳಿದರು.
"ನಾವು ಅಯೋಧ್ಯೆಯನ್ನು ಆಧ್ಯಾತ್ಮಿಕ ನಗರವಾಗಿ ಅಭಿವೃದ್ಧಿಪಡಿಸಲು ಬಯಸುತ್ತೇವೆ. ಮರೆತಿರುವ ಸಂಸ್ಕೃತಿಯನ್ನು ಮರಳಿ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ" ಎಂದರು.
ಏತನ್ಮಧ್ಯೆ, ಆಲಿಘರ್, ಸಹರಾನ್ಪುರ, ಅಝಾಮ್ಘರ್ ರಾಜ್ಯಗಳಲ್ಲಿ ತಲಾ ಒಂದೊಂದು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ.
ಆಲಿಘರ್ನಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯ, ಸಹರಾನ್ಪುರದಲ್ಲಿ ಮಾ ಶಕುಂಭಾರಿ ದೇವಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಅಝಾಮ್ಘರ್ನಲ್ಲಿ ಮೂರನೇ ವಿಶ್ವವಿದ್ಯಾಲಯದ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.