ಕೇರಳ, ಮಾ.22 (DaijiworldNews/PY): "ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಉತ್ತರಪ್ರದೇಶದ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ದ ಕಾನೂನು ಜಾರಿಗೊಳಿಸಲಿದೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದೇವಾಲಯದ ಆಡಳಿತವನ್ನು ನಿರ್ವಹಿಸುವ ದೇವಸ್ವಂ ಮಂಡಳಿಯನ್ನು ಪುನಃ ರಚನೆ ಮಾಡುತ್ತೇವೆ. ನಿಜವಾದ ಭಕ್ತರಿಗೆ ದೇವಸ್ವಂ ಮಂಡಳಿಗಳನ್ನು ಹಸ್ತಾಂತರಿಸುತ್ತೇವೆ. ಈ ಎರಡೂ ಭರವಸೆಗಳು ಶೀಘ್ರವೇ ಬಿಡುಗಡೆಯಾಗಲು ಸಜ್ಜಾಗಿರುವ ಪಕ್ಷದ ವಿಧಾನಸಭಾ ಪ್ರಣಾಳಿಕೆಯಲ್ಲಿ ಮುಖ್ಯವಾದ ಅಂಶಗಳಾಗಿರಲಿವೆ" ಎಂದಿದ್ದಾರೆ.
ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇರಳ ಲವ್ ಜಿಹಾದ್ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಕ್ರಿಶ್ಚಿಯನ್ ಸಮುದಾಯವನ್ನ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದೆ. ಸಿಪಿಐಎಂ ಸರ್ಕಾರ ಈ ರೀತಿಯಾದ ಚಟುವಟಿಕೆಗಳಿಗೆ ಬೆಂಬಲಿಸುತ್ತದೆ. ಈಗ ದೇವಸ್ವಂ ಮಂಡಳಿಗಳನ್ನು ರದ್ದು ಮಾಡಲಾಗಿದೆ" ಎಂದು ಹೇಳಿದ್ದಾರೆ.
"ಕೇರಳ ಸಿಪಿಐ ನ ಪ್ರಾಯೋಜಕತ್ವದಲ್ಲಿ ದೇಶವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಕೇರಳದಲ್ಲಿ ಎಡಪಕ್ಷ ಅಭಿವೃದ್ದಿ ಕಾರ್ಯ ಮಾಡಲು ಸಫಲವಾಗಿಲ್ಲ. ಕೇರಣ ಸಿಎಂ ಸರ್ವಾಧಿಕಾರ ಧೋರಣೆ ಮಾಡುತ್ತಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಪಾರದರ್ಶಕತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ" ಎಂದಿದ್ದಾರೆ.