ಚೆನ್ನೈ, ಮಾ.22 (DaijiworldNews/MB) : ತ್ರಿವರ್ಣ ಮತ್ತು ಅಶೋಕ ಚಕ್ರ ವಿನ್ಯಾಸವನ್ನು ಹೊಂದಿರುವ ಕೇಕ್ ಅನ್ನು ಕತ್ತರಿಸುವುದು ದೇಶಭಕ್ತಿಗೆ ವಿರುದ್ದವಲ್ಲ ಅಥವಾ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ 1971 ರ ಅಡಿಯಲ್ಲಿ "ಅವಮಾನ" ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ ಎಂದು ವರದಿಯಾಗಿದೆ.
ತ್ರಿವರ್ಣ ಧ್ವಜದ ಬಣ್ಣ ಹೊಂದಿರುವ ಕೇಕ್ ಕತ್ತರಿಸುವುದು ರಾಷ್ಟ್ರೀಯ ಗೌರವ ಕಾಯ್ದೆ 1971 ರ ಸೆಕ್ಷನ್ 2 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಆರೋಪಿಸಿ ಡಿ ಸೆಂಥಿಲ್ಕುಮಾರ್ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದು
2013 ರಲ್ಲಿ ನಡೆದ ಕ್ರಿಸ್ಮಸ್ ದಿನದ ಕಾರ್ಯಕ್ರಮವೊಂದರಲ್ಲಿ ತ್ರಿವರ್ಣ ಮತ್ತು ಅದರ ಮೇಲೆ ಅಶೋಕ ಚಕ್ರದೊಂದಿಗೆ 6×5 ಅಡಿ ಕೇಕ್ ಕತ್ತರಿಸಿ, 2,500 ಕ್ಕೂ ಹೆಚ್ಚು ಅತಿಥಿಗಳು ಸೇವಿಸಿದ್ದರು. ಈ ವಿಚಾರದಲ್ಲಿ ಡಿ ಸೆಂಥಿಲ್ಕುಮಾರ್ ದೂರು ದಾಖಲಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೊಯಮತ್ತೂರ್ ಜಿಲ್ಲಾಧಿಕಾರಿ, ಪೊಲೀಸ್ ಉಪ ಆಯುಕ್ತರು, ವಿವಿಧ ಧಾರ್ಮಿಕ ಮುಖಂಡರು, ಎನ್ ಜಿಒಗಳ ಸದಸ್ಯರು ಭಾಗವಹಿಸಿದ್ದರು.
ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೋಮವಾರ ಈ ಪ್ರಕರಣದ ವಿಚಾರಣೆ ವೇಳೆ ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಲು ಆದೇಶಿಸಿದ್ದು, ''ಭಾರತದಂತಹ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಬಹಳ ಮಹತ್ವದ್ದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅದು ಅದರ ಅತಿರೇಕವು ನಮ್ಮ ರಾಷ್ಟ್ರದ ಸಮೃದ್ಧಿಗೆ ಹಿಂದಿನ ಎಲ್ಲ ವೈಭವಕ್ಕೆ ವಿರುದ್ದವಾದುದು. ದೇಶಭಕ್ತಿ ಎಂದರೆ ಕೇವಲ ರಾಷ್ಟ್ರ ಧ್ವಜ ಎತ್ತಿ ಹಿಡಿಯುವುದಲ್ಲ, ತೋಳಿನ ಮೇಲೆ ಧರಿಸುವುದಲ್ಲ ಮಾತ್ರವಲ್ಲ ಬದಲಾಗಿ ಉತ್ತಮ ಆಡಳಿತಕ್ಕಾಗಿ ಶ್ರಮಿಸುವುದಾಗಿದೆ'' ಎಂದು ಹೇಳಿದ್ದಾರೆ.
''ರಾಷ್ಟ್ರೀಯ ಹೆಮ್ಮೆಯ ಸಂಕೇತವು ದೇಶಭಕ್ತಿಗೆ ಸಮಾನಾರ್ಥಕವಲ್ಲ ಹೇಗೆಯೋ ಹಾಗೆಯೇ ಕೇಕ್ ಕತ್ತರಿಸುವುದು ಅವಮಾನವಲ್ಲ'' ಎಂದು ಹೇಳಿದ್ದಾರೆ.