ಬೆಂಗಳೂರು, ಮಾ.22 (DaijiworldNews/PY): ಕಲ್ಯಾಣ ಕರ್ನಾಟಕಕ್ಕೆ ನಾಮಕರಣ ಮಾಡಿದ್ದು ಬಿಟ್ಟರೆ, ಬಿಜೆಪಿ ಸರ್ಕಾರ ಮಾಡಿದ್ದು ದ್ರೋಹದ ಮೇಲೆ ದ್ರೋಹ ಎಂದಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಿರುವ ಬಿಜೆಪಿ, "ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಊದಿದ್ದು ಕೇವಲ ತುತ್ತೂರಿ ಮಾತ್ರ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ ಎಂಬ ಕಾಂಗ್ರೆಸ್ ಪ್ರಶ್ನೆಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ವೃದ್ಧಿಗೂ ಸಂಬಂಧವಿದೆ. ಖರ್ಗೆ ಆಸ್ತಿಯ ಬಗ್ಗೆ ಕಾಂಗ್ರೆಸ್ ಮೊದಲು ಪ್ರಶ್ನೆ ಮಾಡಬೇಕು. ಆಗ ಈ ಜಿಲ್ಲೆಗಳು ಹಿಂದುಳಿದಿರುವುದಕ್ಕೆ ಉತ್ತರ ಸಿಗುತ್ತದೆ. ಕಲ್ಯಾಣ ಕರ್ನಾಟಕದ ನಿಜವಾದ ವೈರಿಯೇ ಕಾಂಗ್ರೆಸ್" ಎಂದು ಆರೋಪಿಸಿದೆ.
"ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಊದಿದ್ದು ಕೇವಲ ತುತ್ತೂರಿ ಮಾತ್ರ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ರೂ. 1500 ಕೋಟಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರ. ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು?" ಎಂದು ಪ್ರಶ್ನಿಸಿದೆ.
"ಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ! ಆದರೆ, ನೆಹರೂ ಮಾಡಿದ್ದೇನು!?. ಅಕ್ಸಾಯ್ ಚಿನ್ ಪ್ರದೇಶದ 37244 ಚದರ ಕಿ.ಮೀ. ಭೂಮಿಯನ್ನು ಚೀನಾ ದೇಶಕ್ಕೆ ಬಿಟ್ಟುಕೊಟ್ಟರು. ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಂವಿಧಾನವನ್ನೇ ತಿದ್ದುಪಡಿ ಮಾಡಿದರು" ಎಂದು ಹೇಳಿದೆ.
"ಕಲ್ಯಾಣ ಕರ್ನಾಟಕಕ್ಕೆ ನಾಮಕರಣ ಮಾಡಿದ್ದು ಬಿಟ್ಟರೆ, ಬಿಜೆಪಿ ಸರ್ಕಾರ ಮಾಡಿದ್ದು ದ್ರೋಹದ ಮೇಲೆ ದ್ರೋಹ. ಡಬಲ್ ಇಂಜಿನ್ ಸರ್ಕಾರಗಳು ಕೆಕೆಆರ್ಡಿಬಿ ಅನುದಾನಕ್ಕೆ ಕತ್ತರಿ ಹಾಕಿವೆ. ಬಜೆಟ್ನಲ್ಲೂ ಯಾವುದೇ ಯೋಜನೆಗಳಿಲ್ಲ. ಬದಲಿಗೆ ಪ್ರತಿ ಬಜೆಟ್ನಲ್ಲೂ ಅನುದಾನಕ್ಕೆ ಕತ್ತರಿ ಹಾಕಾಲಾಗುತ್ತಿದೆ" ಎಂದು ಕಾಂಗ್ರೆಟ್ ಟ್ವೀಟ್ ಮಾಡಿತ್ತು.
"ಎನ್ಪಿಎಯಲ್ಲಿ ಶಿಕ್ಷಣ ಸಾಲದ್ದೇ ಹೆಚ್ಚು ಪಾಲು. ಭವಿಷ್ಯದ ಕನಸು ಹೊತ್ತು ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಿಲ್ಲದೆ ತೀರಿಸಲಾಗುತ್ತಿಲ್ಲ. ಮೋದಿನಾಮಿಕ್ಸ್ನಿಂದ ಉದ್ಯೋಗಗಳ ಬಾಗಿಲು ಮುಚ್ಚಿ ಯುವಜನತೆಯ ಭವಿಷ್ಯ ದಿಕ್ಕಿಲ್ಲದಂತಾಗಿದೆ. ನಾನು ಚಹಾ ಮಾರಿದ್ದೇನೆ, ನೀವು ಪಕೋಡಾ ಮಾರಿ ಎನ್ನುವವರಿದ್ದಾಗ ಇನ್ನೇನಾಗಲು ಸಾಧ್ಯ!" ಎಂದು ಕೇಳಿತ್ತು.