ತುಮಕೂರು, ಮಾ.22 (DaijiworldNews/PY): ತುಮಕೂರು ಜಿಲ್ಲೆಯ ಕೊರಗೆರೆ ಪಟ್ಟಣದ ಸಮೀಪದ ಜಂಪೇನಹಳ್ಳಿಯಲ್ಲಿ ಎತ್ತಿನಹೊಳೆ ಕಾಮಗಾರಿ ಬ್ಲಾಸ್ಟಿಂಗ್ ಶಬ್ದದಿಂದ ಮೂರು ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆ ಕಾಮಗಾರಿ ಕಳೆದ ತಿಂಗಳಿನಿಂದ ನಡೆಯುತ್ತಿದೆ. ಪೈಪ್ ಲೈನ್ ಅಳವಡಿಸುವ ಸಂದರ್ಭ ಕಲ್ಲುಬಂಡೆ ಅಡ್ಡವಾದ ಕಾರಣ ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡದೇ ಬ್ಲಾಸ್ಟ್ ಮಾಡಲಾಗಿತ್ತು. ಆ ಸ್ಥಳದಿಂದ ಕೇವಲ 50 ಮೀ. ದೂರದಲ್ಲಿ ಕುಟುಂಬವಾಸವಾಗಿತ್ತು. ಸ್ಪೋಟಗೊಂಡ ಸದ್ದಿಗೆ ಮೂರು ತಿಂಗಳ ಮಗು ಸಾವನ್ನಪ್ಪಿದೆ.
ಮಗುವಿನ ಪೋಷಕರು ಸ್ಮಶಾನದಲ್ಲಿ ಮಗುವಿನ ಅಂತ್ಯಸಂಸ್ಕಾರ ಮಾಡುವ ಸಂದರ್ಭ ಸ್ಥಳಕ್ಕೆ ಧಾವಿಸಿದ ಪಕ್ಕದ ಜಮೀನಿನ ಕಾವಲುಗಾರ ಶವಸಂಸ್ಕಾರ ಮಾಡದಂತೆ ಅಡ್ಡಿಪಡಿಸಿದ್ದಾನೆ. ಎಷ್ಟೇ ಮನವಿ ಮಾಡಿದರೂ ಕೂಡಾ ಶವಸಂಸ್ಕಾರಕ್ಕೆ ಒಪ್ಪದ ಕಾರಣ ಗುಂಡಿಯಲ್ಲಿ ಇಟ್ಟಿದ್ದ ಮಗುವಿನ ಶವವನ್ನು ತೆಗೆದು ಸಮೀಪ ಇದ್ದ ರಾಜಕಾಲುವೆಯಲ್ಲಿ ಶವಸಂಸ್ಕಾರ ಮಾಡಲಾಗಿದೆ.
"ಧಾರ್ಮಿಕ ವಿಧಿ-ವಿಧಾನಗಳನ್ನು ಮುಗಿಸಿ ಮಗುವನ್ನು ಗುಂಡಿಯಲ್ಲಿಟ್ಟು ಮಣ್ಣು ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೋರ್ವ ನಮ್ಮನ್ನು ತಡೆದು ಇದು ಗಾರ್ಮೆಂಟ್ಸ್ ಕಂಪೆನಿಗೆ ಸೇರಿದ ಜಾಗ. ಈ ಜಾಗದಲ್ಲಿ ಶವ ಹೂಳವಂತಿಲ್ಲ ಎಂದ. ಎಷ್ಟೇ ಮನವಿ ಮಾಡಿದರೂ ಆತ ಕೇಳಲೇ ಇಲ್ಲ. ಬಳಿಕ ಗುಂಡಿಯಲ್ಲಿಟ್ಟಿದ್ದ ಮಗುವಿನ ಶವವನ್ನು ಹೊರತೆಗೆದು ಸಮೀಪದಲ್ಲಿದ್ದ ರಾಜಕಾಲುವೆಯಲ್ಲಿ ಗುಂಡೆ ತೆಗೆದು ಮುಚ್ಚಿದೆವು" ಎಂದು ಮಗುವಿನ ಪೋಷಕರಾದ ರಂಗನಾಥ್ ಹಾಗೂ ನೇತ್ರಾವತಿ ಹೇಳಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸೆಕ್ಯೂರಿಟಿಯ ಜೊತೆ ಗಾರ್ಮೆಂಟ್ಸ್ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಒತ್ತಾಯಿಸಿದ್ದಾರೆ.
ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು ಪ್ರತಿಕ್ರಿಯೆ ನೀಡಿದ್ದು, ಸುವರ್ಣಮುಖಿ ನದಿ ಹಾಗೂ ರಾಜಕಾಲುವೆ ಒತ್ತುವರಿಯ ಬಗ್ಗೆ ಶೀಘ್ರವೇ ಸರ್ವೆಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.