ಮುಂಬೈ, ಮಾ.22 (DaijiworldNews/HR): "ಮಹಾರಾಷ್ಟ್ರದ ಸರ್ಕಾರಕ್ಕೆ ಸಾಕಷ್ಟು ಸಂಖ್ಯಾಬಲವಿದ್ದು, ಒಬ್ಬ ಅಧಿಕಾರಿ ಮಾಡಿರುವ ಭ್ರಷ್ಟಾಚಾರ ಆರೋಪದಿಂದಾಗಿ ಸರ್ಕಾರ ಬೀಳಲು ಸಾಧ್ಯವಿಲ್ಲ" ಎಂದು ಶಿವಸೇನಾ ಹೇಳಿದೆ.
ಈ ಕುರಿತು ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ, "ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಇದರಿಂದಾಗಿ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿರುವುದು ನಿಜ. ಆದರೆ ಒಬ್ಬ ಅಧಿಕಾರಿಯಿಂದ ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ" ಎಂದಿದೆ.
"ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಇದು ಪ್ರತಿಷ್ಠೆಯ ವಿಷಯವಾಗಿದ್ದು, ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ಬಹುಮತವನ್ನು ಹಾಳುಗೆಡವಲು ಪ್ರಯತ್ನಿಸಿದರೆ ಮಾತ್ರ, ಬೆಂಕಿ ಕಾಣಿಸಿಕೊಳ್ಳಲಿದೆ" ಎಂದು ಹೇಳಿದೆ.
ಇನ್ನು ಕಳೆದ ವಾರ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪತ್ರ ಬರೆದಿದ್ದರು ಎನ್ನಲಾಗಿದೆ.