ಬಿಕಾನೇರ್, ಮಾ.22 (DaijiworldNews/PY): "ಆಟವಾಡುತ್ತಿದ್ದ ಐವರು ಮಕ್ಕಳು ಧಾನ್ಯ ಸಂಗ್ರಹಣಾ ಕಂಟೈನರ್ನೊಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಿಕಾನೇರ್ನ ಹಿಮ್ಮತ್ ಸರ್ ಗ್ರಾಮದಲ್ಲಿ ನಡೆದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ಮಕ್ಕಳನ್ನು, ಸೇವಾರಾಂ (4), ರವೀನಾ(7), ರಾಧಾ (5), ಪೂನಂ (8) ಹಾಗೂ ಮಾಲಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಧಾನ್ಯ ಸಂಗ್ರಹಣಾ ಕಂಟೈನರ್ ಬಹುತೇಕ ಖಾಲಿಯಾಗಿತ್ತು. ಮಕ್ಕಳು ಆಟವಾಡುತ್ತಾ ಒಬ್ಬರ ಬಳಿಕ ಒಬ್ಬರು ಕಂಟೈನರ್ನೊಳಗೆ ಜಿಗಿದಿದ್ದು, ಈ ವೇಳೆ ಕಂಟೈನರ್ ಆಕಸ್ಮಿಕವಾಗಿ ಮುಚ್ಚಿಕೊಂಡಿತು. ಮಕ್ಕಳು ಕಂಟೈನರ್ ಒಳಗೆ ಸಿಲುಕಿಹಾಕಿಕೊಂಡರು.
"ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಸಂದರ್ಭ ಮಕ್ಕಳು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು" ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಚಂದ್ರ ತಿಳಿಸಿದ್ದಾರೆ.
"ಮಕ್ಕಳ ಪೋಷಕರು ಮನೆಗೆ ಬಂದ ಸಂದರ್ಭ ಮಕ್ಕಳು ಮನೆಯಲ್ಲಿ ಇರಲಿಲ್ಲ. ಈ ವೇಳೆ ಹುಡುಕಾಟ ನಡೆಸಿದಾಗ ಮಕ್ಕಳು ಕಂಟೈನ್ರ್ ಒಳಗೆ ಪತ್ತೆಯಾಗಿದ್ದಾರೆ" ಎಂದು ಪ್ರೀತಿ ಹೇಳಿದ್ದಾರೆ.