ಹೈದರಾಬಾದ್, ಮಾ.22 (DaijiworldNews/PY): ಕೊರೊನಾ ನೆಗೆಟಿವ್ ವರದಿಯೊಂದಿಗೆ ವಿಮಾನ ಪ್ರಯಾಣ ಮಾಡಿದ್ದ ಹಲವು ಪ್ರಯಾಣಿಕರನ್ನು ಹೈದರಾಬಾದ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಿದ ವೇಳೆ ಕೊರೊನಾ ಪಾಸಿಟಿವ್ ಬಂದ ಘಟನೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿದ್ದ ಕೆಲವು ಅಂತರಾಷ್ಟ್ರೀಯ ಪ್ರಯಾಣಿಕರನ್ನು ಹೈದರಾಬಾದ್ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ರೀತಿಯಾದ ಪ್ರಕರಣಗಳಿ ಪತ್ತೆಯಾದ ಬಗ್ಗೆ ದೃಢಪಡಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಅನುರಾಧಾ ಮೆದೋಜು, "ಕ್ವಾರಂಟೈನ್ ಹಾಗೂ ಇತರೆ ಉದ್ದೇಶಗಳ ಸಲುವಾಗಿ ಈ ಪಾಸಿಟಿವ್ ವರದಿಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಜೊತೆ ಹಂಚಿಕೊಳ್ಳಲಾಗಿದೆ" ಎಂದಿದ್ದಾರೆ.
"ಪ್ರಯಾಣಿಕರು ನೆಗೆಟಿವ್ ವರದಿ ಹೊಂದಿದ್ದರೂ ಕೂಡಾ, ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲವು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ರೀತಿಯಾದ ಎಷ್ಟೋ ಪ್ರಕರಣಗಳು ವರದಿಯಾಗಿವೆ ಎನ್ನುವ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ" ಎಂದು ತಿಳಿಸಿದ್ದಾರೆ.
"ಪ್ರಯಾಣದ ಸಲುವಾಗಿ ಕೆಲವು ಪ್ರಯಾಣಿಕರು ನಕಲಿ ಪರೀಕ್ಷಾ ವರದಿಯನ್ನು ಪಡೆದಿರುವ ಸಾಧ್ಯತೆ ಇದೆ" ಎಂದು ಮೂಲಗಳು ತಿಳಿಸಿವೆ.