ನವದೆಹಲಿ, ಮಾ.22 (DaijiworldNews/MB) : ತಾನು ಗರ್ಭಧರಿಸಬೇಕೆಂಬ ಕಾರಣಕ್ಕೆ 25 ವರ್ಷದ ಮಹಿಳೆಯೊಬ್ಬಳು ನೆರೆಮನೆಯವರ 3 ವರ್ಷದ ಮಗನನ್ನು ಹತ್ಯೆಗೈದ ಘಟನೆ ವಾಯುವ್ಯ ದೆಹಲಿಯ ರೋಹಿಣಿಯಲ್ಲಿ ನಡೆದಿದೆ. ಬಾಲಕನ ಹತ್ಯೆಗೈದ ಆ ಮಹಿಳೆಯು ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮೇಲ್ಛಾವಣಿಯಲ್ಲಿ ಇರಿಸಿದ್ದಾಳೆ.
ಬಂಧನಕ್ಕೊಳಗಾದ ಮಹಿಳೆ ನೀಲಂ ಗುಪ್ತಾ, ''ನಾನು ಗರ್ಭಿಣಿಯಾಗಲು ಸಾಕಷ್ಟು ಪ್ರಯತ್ನ ಮಾಡಿದ್ದೆ. ಆದರೆ ಆಗಲಿಲ್ಲ. ಇದರಿಂದಾಗಿ ನನ್ನ ಮೇಲೆ ಕುಟುಂಬಸ್ಥರು ಒತ್ತಡ ಹೇರುತ್ತಿದ್ದರು. ನನ್ನ ಗಂಡನ ಮನೆಯವರು ಹಾಗೂ ಸಂಬಂಧಿಕರು ನಿಂದಿಸುತ್ತಿದ್ದರು. ಆದ್ದರಿಂದ ನಾನು ಮಂತ್ರವಾದಿಯ ಬಳಿಗೆ ಹೋದೆ. ಅವರು ದೇವತೆಗಳನ್ನು ಮೆಚ್ಚಿಸಲು ಮಗುವನ್ನು ಬಲಿ ನೀಡುವಂತೆ ಸೂಚಿಸಿದರು. ಅದಕ್ಕೆ ನಾನು ಮಗುವನ್ನು ಬಲಿ ನೀಡಿದೆ'' ಎಂದು ಹೇಳಿದ್ದಾಳೆ.
''ಆಕೆ ತನ್ನ ನೆರೆಯ ಮನೆಯವರ ಮೂರು ವರ್ಷದ ಮಗನನ್ನು ಕೊಂದು ಅವನ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದಳು'' ಎಂದು ಪೊಲೀಸರು ತಿಳಿಸಿದ್ದಾರೆ.
''ನೀಲಂ ಗುಪ್ತಾ 2013 ರಲ್ಲಿ ವಿವಾಹವಾಗಿದ್ದು ವೈದ್ಯರನ್ನು ಸಂಪರ್ಕಿಸಿದರೂ ಗರ್ಭಿಣಿಯಾಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಈ ಕಾರಣದಿಂದಾಗಿ ಆಕೆ ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದ ಹರ್ದಾಯಿಯಲ್ಲಿರುವ ತನ್ನ ಗ್ರಾಮದಲ್ಲಿನ ಓರ್ವ ಮಂತ್ರವಾದಿಯ ಸಂಪರ್ಕ ಮಾಡಿದ್ದು, ಆತ ಆಕೆ ಗರ್ಭಧರಿಸಬೇಕಾದರೆ ಮಗುವನ್ನು ಬಲಿ ನೀಡಬೇಕೆಂದು ಹೇಳಿದ್ದಾನೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ಬಾಲಕ ನಾಪತ್ತೆಯಾದ ಕಾರಣ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಮಗುವನ್ನು ಪತ್ತೆ ಹಚ್ಚಲು ಪೊಲೀಸರು ಸಂಪೂರ್ಣ ಶೋಧ ನಡೆಸಿದ್ದಾರೆ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಸಿಬ್ಬಂದಿಯೊಬ್ಬರು ಪಕ್ಕದ ಮನೆಯ ಛಾವಣಿಯ ಮೇಲೆ ಒಂದು ಚೀಲವನ್ನು ಗಮನಿಸಿದರು. ಅದನ್ನು ತೆರೆದಾಗ, ಅದರಲ್ಲಿ ಬಾಲಕನ ಶವವಿದ್ದು ಕುತ್ತಿಗೆ ಮೇಲೆ ಗಾಯದ ಗುರುತುಗಳಿದ್ದವು. ಬಾಲಕನನ್ನು ಕತ್ತು ಹಿಸುಕಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
''ಮಗುವಿನ ತಂದೆಯ ಹೇಳಿಕೆಯ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆಯ ಸಮಯದಲ್ಲಿ, ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಪ್ರಶ್ನಿಸಲಾಗಿದೆ. ಮಗುವನ್ನು ಅವರ ನೆರೆಹೊರೆಯವರೊಂದಿಗೆ ಕೊನೆಯದಾಗಿ ನೋಡಲಾಗಿದೆ ಎಂದು ತಿಳಿದುಬಂದ ಹಿನ್ನೆಲೆ ನೆರೆಮನೆಯವರಾದ ನೀಲಂ ನನ್ನು ಪ್ರಶ್ನಿಸಿದಾಗ ಆಕೆ ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದಳು. ಆದರೆ ಬಳಿಕ ಮೇಲ್ಫಾವಣಿಯ ಮೇಲೆ ಬಾಲಕ ಏಕಾಂಗಿಯಾಗಿ ಆಡುತ್ತಿದ್ದಾಗ ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ'' ಎಂದು ಪೊಲೀಸರು ತಿಳಿಸಿದ್ದಾರೆ.
''ಮಹಿಳೆಯು ಗೃಹಿಣಿಯಾಗಿದ್ದು ಆಕೆಯ ಪತಿ ತರಕಾರಿ ಮಾರಾಟಗಾರ'' ಎಂದು ಪೊಲೀಸರು ತಿಳಿಸಿದ್ದಾರೆ.