ಬೆಂಗಳೂರು, ಮಾ.22 (DaijiworldNews/PY): "ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಹಾಗಾಗಿ ಸೆಮಿ ಲಾಕ್ಡೌನ್ ಹಾಗೂ ಲಾಕ್ಡೌನ್ ಮಾಡುವುದಿಲ್ಲ" ಎಂದು ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪರಿಸ್ಥಿತಿಗಳನ್ನು ಅವಲೋಕಿಸಿ ಕೆಲವು ತೀರ್ಮಾನಗಳನ್ನು ನಿನ್ನೆ ನಡೆದ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗಗಳಿಂದ ಬರುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಇರುವವರನ್ನು ಒಳಗಡೆ ಬಿಡದಂತೆ ಸೂಚನೆ ನೀಡಲಾಗಿದ್ದು, ಸ್ಥಳದಲ್ಲೇ ಪರೀಕ್ಷೆ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತದೆ" ಎಂದಿದ್ದಾರೆ.
"ಹೆಚ್ಚಿನ ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಓಡಾಡುವವರಿಗೆ 250 ರೂ.ದಂಡ ವಿಧಿಸುವ ಕ್ರಮವನ್ನು ಎರಡು ದಿನಗಳೊಳಗೆ ತೆಗೆದುಕೊಳ್ಳಲಾಗುತ್ತದೆ. ಸಭೆಯಲ್ಲಿ, ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳುವಂತೆ ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
"ವಿವಾಹ ಸಮಾರಂಭಗಳಲ್ಲಿ ನಿಗದಿಪಡಿಸಿದ ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಮಾರ್ಷಲ್ಗಳನ್ನು ಕಳುಹಿಸಲಾಗುವುದು. ಅಲ್ಲದೇ, ದಂಡ ಕೂಡಾ ವಿಧಿಸಲಾಗುವುದು. ನಿಯಮ ಉಲ್ಲಂಘನೆಯಾದಲ್ಲಿ ಸಮಾರಂಭದ ಆಯೋಜಕರು ಹಾಗೂ ಸ್ಥಳದ ಮಾಲೀಕರ ವಿರುದ್ದ ಕೂಡಾ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.