ರಾಮನಗರ(ಉತ್ತರಾಖಂಡ), ಮಾ.22 (DaijiworldNews/MB) : ಬಡ ಕುಟುಂಬಕ್ಕೆ ಕೇಂದ್ರ ಸರ್ಕಾರ ಯೋಜನೆಯಿಂದ ಹೆಚ್ಚಿನ ಪಡಿತರ ಬೇಕಿದ್ದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಭಾನುವಾರ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಮಾರ್ಚ್ 10ರಂದು ಅಧಿಕಾರ ಸ್ವೀಕರಿಸಿದ ರಾವತ್ ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ, ''ಯುವತಿಯರು ಹರಿದ ಜೀನ್ಸ್ ಧರಿಸುತ್ತಿದ್ದು, ಇದ್ಯಾವ ಸಂಸ್ಕೃತಿ. ಇಂತಹ 'ಹರಿದ ಸಂಸ್ಕೃತಿ'ಯು ಮಕ್ಕಳಿಗೆ ಯಾವ ಸಂದೇಶ ರವಾನಿಸುತ್ತದೆ?'' ಎಂದು ಪ್ರಶ್ನಿಸುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ಹೇಳಿಕೆಯಿಂದಾಗಿ ಮಹಿಳಾ ಸಂಘಟನೆಗಳು ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
''ಕೊರೊನಾ ಸಾಂಕ್ರಾಮಿಕದ ಮಧ್ಯೆ ತಮ್ಮನ್ನು ತಾವು ಪೋಷಿಸಿಕೊಳ್ಳಲು ಕಷ್ಟಪಡುತ್ತಿರುವ ಬಡ ಕುಟುಂಬಗಳು ಕೇಂದ್ರ ಸರ್ಕಾರದ ಯೋಜನೆಯಿಂದ ವಿತರಿಸುವ ಹೆಚ್ಚಿನ ಪಡಿತರವನ್ನು ಬಯಸುವುದಾದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು'' ಎಂದು ಹೇಳಿದ್ದಾರೆ.
''ಪ್ರತಿ ಮನೆಗೆ 5 ಕೆಜಿ ಪಡಿತರವನ್ನು ನೀಡಲಾಯಿತು. ಒಂದು ಮನೆಯಲ್ಲಿ 10 ಜನರಿದ್ದವರು 50 ಕೆಜಿ ಸಿಗುತ್ತದೆ, 20 ಜನರಿಗೆ ಕ್ವಿಂಟಾಲ್ (100 ಕೆಜಿ) ಸಿಗುತ್ತದೆ. ಆದರೆ ಇಬ್ಬರೇ ಇರುವವರು 20 ಜನರಿದ್ದ ಮನೆಗೆ ಕ್ವಿಂಟಾಲ್ ಪಡಿತರ ದೊರೆತಾಗ ಅಸೂಯೆ ಪಡುತ್ತಾರೆ. ಅಷ್ಟಕ್ಕೂ ಅವರಿಗೆ ಹೆಚ್ಚು ಪಡಿತರ ಬೇಕಿದ್ದರೆ ಮಕ್ಕಳಿಗೆ ಜನ್ಮ ನೀಡಿದ ಸಮಯದಲ್ಲಿ 20 ಮಕ್ಕಳಿಗೆ ಏಕೆ ಜನ್ಮ ನೀಡಲಿಲ್ಲ'' ಎಂದು ಪ್ರಶ್ನಿಸಿದ್ದಾರೆ.