ಬೆಂಗಳೂರು, ಮಾ.22 (DaijiworldNews/PY): ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, "ವರ್ಷದ ಹಿಂದೆಯೇ ಚುನಾವಣೆಗಳಾದ ಬಾಂಬೆ ತಂಡದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ?" ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗ(?)ದಿಂದ ಬಿಎಸ್ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ?" ಎಂದು ಕೇಳಿದ್ದಾರೆ.
"ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಈಗ ಮುಹೂರ್ತ ಬಂದಿದೆ, ಒಪ್ಪೋಣ. ಆದರೆ, ವರ್ಷದ ಹಿಂದೆಯೇ ಚುನಾವಣೆಗಳಾದ 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಸಿಎಂ ಯಡಿಯೂರಪ್ಪನವರೇ? ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು ಎಂದು ನಿಮಗಾದರೂ ಅನಿಸದೇ?" ಎಂದು ಪ್ರಶ್ನಿಸಿದ್ದಾರೆ.
"ಮಸ್ಕಿ ಕ್ಷೇತ್ರವಿರಲಿ, ಬೇರಾವ ಕ್ಷೇತ್ರವೇ ಆಗಿರಲಿ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೆಲ್ಲಿದೆ ಮುಖ್ಯಮಂತ್ರಿಗಳೇ? ರಾಜ್ಯದ ತೆರಿಗೆ ಹಣ, ಜನರ ಬೆವರಿನ ಋಣ ನಿಮ್ಮ ಸರ್ಕಾರದಲ್ಲಿರುವ ಏಕಗವಾಕ್ಷಿಗೆ ಆಪೋಷನವಾಗುತ್ತಿಲ್ಲವೇ? ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ಏಕಗವಾಕ್ಷಿ ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು" ಎಂದಿದ್ದಾರೆ.