ಬೆಂಗಳೂರು, ಮಾ.22 (DaijiworldNews/HR): ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟ್ವೀಟ್ ವಾರ್ ಮುಂದುವರೆದಿದ್ದು, ನಳಿನ್ ಕುಮಾರ್ ಕಟೀಲ್ಗೆ ಬೇಕಾದರೆ ಬಟ್ಟೆ ದಾನ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯನವರಿಗೆ ಸಚಿವ ಶ್ರೀರಾಮಲು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶ್ರೀರಾಮಲು, "ಪಕ್ಷ ಬಿಡಿ, 90 ಜೊತೆ ಬಟ್ಟೆಗಳಲ್ಲಿ ನಿಮ್ಮ ಪಕ್ಷದ ಹಿರಿಯ ತಲೆಗಳಾದ ಮೇಟಿಗೆ ಮತ್ತು ಅಭಿಷೇಕ್ ಮನು ಸಿಂಘ್ವಿಗೆ ಎಷ್ಟು ಕೊಟ್ಟಿದ್ದೀರ? ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿ ಹೋದ ನಾಯಕನಿಗೆ ಜನತೆ, ಸ್ವಂತ ಪಕ್ಷವೇ ಕೈ ಹಿಡಿಯಲಿಲ್ಲ. ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಕಾಣಲೆಂದು ಹಾರೈಸುತ್ತೇನೆ" ಎಂದು ಟಾಂಗ್ ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ, "ಕಾಂಗ್ರೆಸ್ ಒಳಜಗಳದ ಪಕ್ಷವಾಗಿದೆ. ಕಾಂಗ್ರೆಸ್ ಸೋಲುವ ಪಕ್ಷವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಪಕ್ಷ ಇದೀಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಕಾರಣದಿಂದ ಅವರು ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ಹಾಗಾಗಿ ಅವರು 90 ಜೊತೆ ಬಟ್ಟೆ ಹೊಲಿಸಿಕೊಂಡಿದ್ದಾರೆ" ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಕರ್ನಾಟಕ ಬಿಜೆಪಿಯ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ನಳಿನ್ ಕುಮಾರ್ ಕಟೀಲು ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡುತ್ತೇನೆ" ಎಂದು ಹೇಳಿದ್ದಾರೆ.