ಮುಂಬೈ, ಮಾ.21 (DaijiworldNews/HR): "ಕುಡಿಯುವ ನೀರಿಗಾಗಿ ಮುಸ್ಲಿಂ ಬಾಲಕನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ನಡೆದಿದ್ದು, ಈ ಕುರಿತು ಶಿವಸೇನೆ ಮುಖಂಡ ಸಂಜಯ್ ರಾವತ್, ಇದು ಯಾವ ರೀತಿಯ ರಾಮರಾಜ್ಯ" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗುವ ತಮ್ಮ ಅಂಕಣ 'ರೋಖ್ತೋಕ್'ನಲ್ಲಿ ಬರೆದಿರುವ ಅವರು, "ಕೋಮು ಧ್ರುವೀಕರಣದಲ್ಲಿ ಪಾಲ್ಗೊಳ್ಳುವ ಮೂಲಕ ಕೆಲವರು ಭಾರತದ ಚಿತ್ರಣವನ್ನೇ ಹಾಳುಗೆಡಹುತ್ತಿದ್ದಾರೆ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ ಎಂದರು.
"ರಾಮನಿಗೆ ಅರ್ಪಿತ ದೇವಾಲಯವೊಂದು ನಿರ್ಮಾಣವಾಗುತ್ತಿರುವ ಭೂಮಿಯಲ್ಲಿ ಈ ಘಟನೆ ನಡೆದಿದ್ದು, ಇದು ಯಾವ ರೀತಿಯ ರಾಮ ರಾಜ್ಯ? ನಾವು ಯಾವ ರೀತಿಯ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು "ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ವಿಭಿನ್ನ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅದರಂತೆ ಅವರು ಈ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.