ಚಿತ್ರದುರ್ಗ, ಮಾ.21 (DaijiworldNews/PY): "ನಿಮಗೆ ನನ್ನ ಮೇಲಿನ ವೈಯುಕ್ತಿಕ ದ್ವೇಷವೇ, ನಿಗಮದ ಮೇಲಿನ ದ್ವೇಷವೇ? ಅಥವಾ ಸರ್ಕಾರದ ಮೇಲಿನ ದ್ವೇಷದ ಕಾರಣದಿಂದ ಪ್ರತಿಭಟನೆ ನಡೆಸುತ್ತಿದ್ದಿರೋ?. ಪುನಃ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು ಯಕ್ಷ ಪ್ರಶ್ನೆಯಾಗಿದೆ" ಎಂದು ಸಾರಿಗೆ ಲಕ್ಷ್ಮಣ ಸವದಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರಶ್ನಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಚಾಲಕರ ತರಬೇತಿ ಕೇಂದ್ರ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಸಾರಿಗೆ ನೌಕರರು ಎಪ್ರಿಲ್ 7ರಂದು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಏಕೆ ಮತ್ತೆ ಮುಷ್ಕರ ಕೈಗೊಳ್ಳುತ್ತಿದ್ದೀರಿ?. 9 ಬೇಡಿಕೆಗಳ ಪೈಕಿ ಎಂಟನ್ನು ಈಡೇರಿಸಿದ್ದೇವೆ. ಕೆಲವೇ ದಿನಗಳಲ್ಲಿ ಉಳಿದ ಒಂದು ಬೇಡಿಕೆಯನ್ನು ಈಡೇರಿಸುತ್ತೇವೆ" ಎಂದು ತಿಳಿಸಿದ್ದಾರೆ.
"ನಾವು ಸಾರಿಗೆ ಇಲಾಖೆ ಸಿಬ್ಬಂದಿಗಳನ್ನು ನಿರ್ಗತಿಕರಾಗಲು ಬಿಡುವುದಿಲ್ಲ. ಯಾರೋ ನೀಡಿದ ತಪ್ಪ ಕಲ್ಪನೆಗೆ ಮತ್ತೆ ಮುಷ್ಕರ ಕೈಗೊಳ್ಳುವುದು ಬೇಡ. ಮುಷ್ಕರ ಕೈಗೊಂಡರೆ ಸಾರಿಗೆ ಇಲಾಖೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾರಿಗೆ ಇಲಾಖೆ ಕುಟುಂಬವಿದ್ದಂತೆ ಹಾಗಾಗಿ ಕುಟುಂಬದಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳೋಣ" ಎಂದಿದ್ದಾರೆ.