ಮುಂಬೈ, ಮಾ.21 (DaijiworldNews/PY): ಉದ್ಯಮಿ ಮನ್ಸುಖ್ ಹಿರೇನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ವಿನಾಯಕ ಶಿಂಧೆ ಹಾಗೂ ಬೂಕ್ಕಿ ನರೇಶ್ ಧರೆ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂಯೆ ಇಬ್ಬರನ್ನು ವಿಚಾರಣೆಗಾಗಿ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಗಿತ್ತು. ವಿಚಾರಣೆಯ ಬಳಿಕ ಇಬ್ಬರನ್ನು ಬಂಧಿಸಲಾಗಿದೆ.
"ವಿನಾಯಕ ಶಿಂಧೆ, ಲಖನ್ ಭಯ್ಯಾ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಆತ ಕಳೆದ ವರ್ಷ ಶಿಕ್ಷೆ ಅವಧಿಯ ರಜೆ ಪಡೆದು ಜೈಲಿನಿಂದ ಬಂದಿದ್ದಾನೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನ್ಸುಖ್ ಹಿರೇನ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಎನ್ಐಎಗೆ ಕೇಂದ್ರ ಗೃಹ ಸಚಿವಾಲಯ ನೀಡಿತ್ತು. ಅದೇ ದಿನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಈವರೆಗೆ ಎಟಿಎಸ್ ಕೈಗೊಂಡಿತ್ತು.
"ಈವರೆಗೆ ರಾಜ್ಯ ಎಟಿಎಸ್ ಪೊಲೀಸ್ ಅಧಿಕಾರಿಗಳು ಹಾಗೂ ಹಲವು ಮಂದಿಯನ್ನು ವಿಚಾರಣೆ ನಡೆಸಿತ್ತು. ಅಲ್ಲದೇ, ಹಿರೇನ್ ಕುಟುಂಬದವರನ್ನು ಕೂಡಾ ವಿಚಾರಣೆ ನಡೆಸಿತ್ತು. ಇದೀಗ ಇಬ್ಬರು ಆರೋಪಿಗಳ ಬಂಧನವಾಗಿದ್ದು, ತನಿಖೆ ಮಹತ್ವದ ಹಂತಕ್ಕೆ ತಲುಪಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.