ಬೆಂಗಳೂರು, ಮಾ.21 (DaijiworldNews/HR): "ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ನಾನು ಸೇರಿದಂತೆ ಇನ್ನು ಕೆಲವು ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ" ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಲಿತಾ ನಾಯಕ್, "ಶಿವರಾಜ್ ಕುಮಾರ್, ಸಿ.ಟಿ.ರವಿ, ನನ್ನನ್ನು ಸೇರಿದಂತೆ ಇನ್ನು ಪ್ರಮುಖರನ್ನು ಮೇ 1ರಂದು ಹತ್ಯೆ ಮಾಡುವ ಪತ್ರ ಬಂದಿದ್ದು, ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ" ಎಂದರು.
"ಪತ್ರದಲ್ಲಿ ನನ್ನನ್ನು, ಸಿ.ಟಿ.ರವಿ, ಖಾಸಗಿ ಚಾನೆಲ್ನ ಸಂಪಾದಕ ರಂಗಣ್ಣ, ನಟ ಶಿವರಾಜ್ಕುಮಾರ್ ನನ್ನು ಹತ್ಯೆ ಮಾಡುವುದಾಗಿ ಬೆದರಿಸಲಾಗಿದೆ" ಎಂದಿದ್ದಾರೆ.
ಇನ್ನು "ಹತ್ಯೆ ಮಾಡುವವರು ಎಲ್ಲಿ ಬೇಕಾದರೂ ಮಾಡಬಹುದು, ಆದರೆ ಅದಕ್ಕೆಲ್ಲಾ ನಾನು ಹೆದರುವುದಿಲ್ಲ. ಹಾಗಾಗಿಯೇ ಇವತ್ತು ಅಭಿನಂದನಾ ಸಮಾರಂಭಕ್ಕೆ ಬಂದಿದ್ದೇನೆ" ಎಂದು ಹೇಳಿದ್ದಾರೆ.