ನವದೆಹಲಿ, ಮಾ.21 (DaijiworldNews/HR): ಶವ ಕತ್ತರಿಸದೆ ಮರಣೋತ್ತರ ಪರೀಕ್ಷೆ ನಡೆಸುವ ನೂತನ ವಿಧಾನವೊಂದನ್ನು ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಪರಿಚಯಿಸಿದೆ.
ಈ ವಿಧಾನವನ್ನು 'ವರ್ಚುವಲ್ ಅಟಾಪ್ಸಿ' ಎಂದು ಕರೆಯಲಿದ್ದು, ಇಂತಹ ವ್ಯವಸ್ಥೆಯನ್ನು ಪರಿಚಯಿಸಿದ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಏಮ್ಸ್ ಪಾತ್ರವಾಗಿದೆ ಎನ್ನಲಾಗಿದೆ.
ಆತ್ಮಹತ್ಯೆ ಅಥವಾ ಅಪಘಾತ ನಡೆದತಂಹ ಪ್ರಕರಣಗಳಲ್ಲಿ ಮೊದಲೇ ಕುಟುಂಬಗಳು ದುಃಖದಲ್ಲಿರುತ್ತವೆ. ಇಂತಹ ಸಂದರ್ಭದಲ್ಲಿ ಮೃತದೇಹವನ್ನು ಕತ್ತರಿಸಿ, ಹೊಲಿಗೆ ಹಾಕುವುದು ದುಃಖವನ್ನು ಹೆಚ್ಚು ಮಾಡುವುದರಿಂದ ಅದನ್ನು ತಪ್ಪಿಸುವುದಕ್ಕಾಗಿ ಏಮ್ಸ್ ದೇಹವನ್ನು ಮುಟ್ಟದೆ ಮರಣೋತ್ತರ ಪರೀಕ್ಷೆ ನಡೆಸಲು ಆರಂಭಿಸಿದೆ.
ಶವವನ್ನು ಒಂದು ಚೀಲಕ್ಕೆ ತುಂಬಿ ಸಿ.ಟಿ. ಸ್ಕ್ಯಾನ್ ಮಾಡಿ, ಬಳಿಕ ಕೆಲವೇ ಸೆಕೆಂಡುಗಳಲ್ಲಿ ದೇಹದ ಆಂತರಿಕ ಭಾಗಗಳು, ಅಂಗಾಂಶಗಳು ಹಾಗೂ ಮೂಳೆಗಳ ಸಹಸ್ರಾರು ಚಿತ್ರಗಳು ಸೆರೆ ಹಿಡಿಯಲ್ಪಡುತ್ತವೆ. ವಿಧಿವಿಜ್ಞಾನ ತಜ್ಞರು ಅದನ್ನು ವಿಶ್ಲೇಷಣೆಗೆ ಒಳಪಡಿಸಬಹುದಾಗಿದೆ.
ಇನ್ನು ಸ್ವಿಜರ್ಲೆಂಡ್, ಅಮೇರಿಕಾ ಹಾಗೂ ಬ್ರಿಟನ್ನಂತಹ ದೇಶಗಳಲ್ಲಿ ವರ್ಚುವಲ್ ಅಟಾಪ್ಸಿ ಇದೆ. ಆದರೆ ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು ಎಂದು ಏಮ್ಸ್ನ ವಿಧಿ ವಿಜ್ಞಾನ ವೈದ್ಯ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ.