ನವದೆಹಲಿ, ಮಾ.21 (DaijiworldNews/PY): "ದೇಶದಲ್ಲಿ ಮುಂದಿನ 2024ರ ಲೋಕಸಭಾ ಚುನಾವಣೆ ವೇಳೆ ರಿಮೋಟ್ ವೋಟಿಂಗ್ ವ್ಯವಸ್ಥೆಗೆ ಸಿದ್ದತೆ ನಡೆದಿದೆ" ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ತಿಳಿಸಿದ್ದಾರೆ.
"ಈ ವರ್ಷದ ಆರಂಭದಿಂದಲೇ ರಿಮೋಟ್ ವೋಟಿಂಗ್ ಅಭಿವೃದ್ದಿಪಡಿಸಲು ಸಂಶೋಧನೆ ನಡೆದಿದೆ. ಈ ಬಗ್ಗೆ ಐಐಟಿ ಮದ್ರಾಸ್ ಹಾಗೂ ಇತರೆ ಐಐಟಿಗಳ ತಂತ್ರಜ್ಞಾನ ಪರಿಣತರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ರಿಮೋಟ್ ವೋಟಿಂಗ್ ಬಗ್ಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಹವರ್ತಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗುವುದು" ಎಂದಿದ್ದಾರೆ.
"ರಿಮೋಟ್ ವೋಟಿಂಗ್ ಬಗ್ಗೆ ಎಲ್ಲರ ಸಹಮತ ಪಡೆದ ನಂತರವೇ ಆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುವುದು" ಎಂದು ತಿಳಿಸಿದ್ದಾರೆ.
ರಿಮೋಟ್ ವೋಟಿಂಗ್ ಬಗ್ಗೆ ಮಾಹಿತಿ ನೀಡಿದ ನಿವೃತ್ತ ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೆನಾ ಅವರು, "ಇಲ್ಲಿ ಬ್ಲಾಕ್ಚೈನ್ ತಂತ್ರಜ್ಞಾವನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ದ್ವಿಮುಖ ವಿದ್ಯುನ್ಮಾನ ವೋಟಿಂಗ್ ವ್ಯವಸ್ಥೆಯ ಕಾರ್ಯವನ್ನು ಮಾಡುತ್ತದೆ. ಇದರಲ್ಲಿ ಪ್ರತ್ಯೇಕವಾದ ಇಂಟರ್ನೆಟ್ ಲೈನ್ನಲ್ಲಿ ಬಳಕೆ ಮಾಡಲಾಗುತ್ತಿದ್ದು, ವೈಟ್ ಲಿಸ್ಟೆಡ್ ಐಪಿ ಡಿವೈಸ್ ಮೂಲಕ ಇದು ಕೆಲಸ ಮಾಡುತ್ತದೆ. ಇಂಟರ್ನೆಟ್ ಆಧಾರಿತ ಬಯೋಮೆಟ್ರಿಕ್ ಉಪಕರಣ ಹಾಗೂ ವೆಬ್ ಕ್ಯಾಮೆರಾದ ಮುಖೆನ ಮತದಾರರ ಗುರುತನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಈ ರಿಮೋಟ್ ವೋಟಿಂಗ್ನಲ್ಲಿ ಯಾವುದೇ ರೀತಿಯಾದ ಅಕ್ರಮಕ್ಕೆ ಅವಕಾಶವಿಲ್ಲ" ಎಂದು ತಿಳಿಸಿದ್ದಾರೆ.
"ಈ ವ್ಯವಸ್ಥೆಯಲ್ಲಿ ಮತದಾರರು ತಮ್ಮ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಇರುವುದಿಲ್ಲ. ಇದಕ್ಕಾಗಿ ನಿರ್ದಿಷ್ಟವಾದ ಕೇಂದ್ರಗಳನ್ನು ಗುರುತಿಸಲಾಗುತ್ತದೆ. ಮತದಾರರು ಮೊದಲೇ ಸಮಯ ನಿಗದಿಪಡಿಸಿಕೊಂಡು ರಿಮೋಟ್ ಮೋಟಿಂಗ್ ಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು" ಎಂದು ಹೇಳಿದ್ದಾರೆ.