ಬೆಂಗಳೂರು, ಮಾ.21 (DaijiworldNews/PY): "ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜು ವಿಚಾರದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ, ಮಕ್ಕಳ ಅರೋಗ್ಯದ ಕಡೆ ಗಮನಹರಿಸಬೇಕಾಗುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯ ನಿಟ್ಟಿನಲ್ಲಿ ಸಿಎಂ ಬಿಎಸ್ವೈ ಅವರೊಂದಿಗೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸರ್ಕಾರದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಜನರು ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದರೆ ಮುಂದೆ ಆಪತ್ತು ಕಾದಿದೆ. ಸರ್ಕಾರ ಲಸಿಕೆ ನೀಡಬಹುದು. ಆದರೆ, ಜನರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಲೇಬೇಕು ಇಲ್ಲವಾದಲ್ಲಿ ಅಪಾಯ ಖಚಿತ" ಎಂದಿದ್ದಾರೆ.
"ಕೊರೊನಾ ನಿಯಮಗಳನ್ನು ಪಾಲಿಸುವುದರೊಂದಿಗೆ ನೀವು ಕೂಡಾ ಸುರಕ್ಷಿತವಾಗಿರಿ. ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ಕೊಡಿಸುವ ಕಾರ್ಯವನ್ನು ಮಾಡಿ. ಪಾರ್ಟಿ, ಜಾತ್ರೆ ಎಂದು ರಿಯಾಯಿತಿಗೆ ಅವಕಾಶವಿಲ್ಲ. ಯುವಕರು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು" ಎಂದು ಹೇಳಿದ್ದಾರೆ.