ಮುಂಬೈ, ಮಾ.21 (DaijiworldNews/PY): ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸ್ಪೋಟಕ ಹೇಳಿಕೆ ನೀಡಿದ್ದು, "ತಿಂಗಳಿಗೆ 100 ಕೋಟಿ. ರೂ. ಲಂಚ ಸಂಗ್ರಹಿಸಿ ಕೊಡುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಸೂಚನೆ ನೀಡಿದ್ದರು" ಎಂದು ಹೇಳಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಸಮೀಪ ಪತ್ತೆಯಾದ ಸ್ಪೋಟಕ ವಾಹನದ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಿಲ್ಲ ಎಂದು ಮುಂಬೈ ನಗರ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಚಿನ್ ವಾಜೆ ಹಾಗೂ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ದ ಪರಮ್ ಬೀರ್ ಸಿಂಗ್ ಅವರು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಪರಮ್ ಬೀರ್ ಸಿಂಗ್ ಅವರು, ಸಿಎಂ ಉದ್ದವ್ ಠಾಕ್ರೆ ಸೇರಿದಂತೆ ರಾಜ್ಯಪಾಲ ಭಗತ್ ಸಿಂಗ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೂ ಪತ್ರ ಬರೆದಿದ್ದಾರೆ.
"ಗೃಹ ಸಚಿವರು, ಪ್ರತಿ ತಿಂಗಳು 100 ಕೋಟಿ. ರೂ. ಲಂಚ ಸಂಗ್ರಹಿಸುವಂತೆ ಸಚಿನ್ ವಾಜೆ ಅವರಿಗೆ ಸೂಚಿಸಿದ್ದರು. ಲಂಚ ಸಂಗ್ರಹ ಮಾಡಲು 1,750 ಬಾರ್ಗಳು ಸೇರಿದಂತೆ ರೆಸ್ಟೋರೆಂಟ್ಗಳು ಹಾಗೀ ಇತರೆ ಸಂಸ್ಥೆಗಳಿವೆ ಎಂದು ವಾಜೆಗೆ ಹೇಳಿದ್ದರು. ಪ್ರತಿಯೊಂದರಿಂದ 2-3 ಲಕ್ಷ ರೂ. ಸಂಗ್ರಹಿಸಿದರೆ ತಿಂಗಳಿಗೆ 40 ರಿಂದ 50 ಕೋಟಿ ರೂ. ಸಂಗ್ರಹವಾಗಬಹುದು. ಇನ್ನುಳಿದ ಮೊತ್ತವನ್ನು ಇತರೆ ಮೂಲಗಳಿಂದ ಸಂಗ್ರಹ ಮಾಡಬಹುದು ಎಂದು ತಿಳಿಸಿದ್ದರು" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಉದ್ದವ್ ಠಾಕ್ರೆ ಸೇರಿದಂತೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ಸಿಂಗ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಸಿಂಗ್ ಅವರು ಐಪಿಎಸ್ ಅಧಿಕಾರಿಗಳ ನಡುವೆ ನಡೆದಿದ್ದ ವಾಟ್ಸಾಪ್ ಚಾಟ್ ಅನ್ನು ಕೂಡಾ ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ಬಿಜೆಪಿ ಆಗ್ರಹಿಸಿದ್ದು, "ಸಂಪುಟದಿಂದ ಕೂಡಲೇ ದೇಶ್ಮುಖ್ ಅವರನ್ನು ವಜಾ ಮಾಡಬೇಕು" ಎಂದಿದೆ.
ಈ ಬಗ್ಗೆ ದೇಶ್ಮುಖ್ ಅವರು ಟ್ವೀಟ್ ಮಾಡಿದ್ದು, "ಮುಖೇಶ್ ಅಂಬಾನಿ ಮನೆ ಸಮೀಪ ಸ್ಪೋಟಕ ತುಂಬಿದ್ದ ವಾಹನ ಇರಿಸಿರುವುದು ಹಾಗೂ ಮನ್ಸುಖ್ ಹಿರೇನ್ ಹತ್ಯೆಯಲ್ಲಿ ಸಚಿನ್ ವಾಜೆ ಅವರು ಶಾಮೀಲಾಗಿರುವ ವಿಚಾರ ಸ್ಪಷ್ಟವಾಗುತ್ತಿದೆ. ಈ ಪ್ರಕರಣ ಪರಮ್ಬೀರ್ ಸಿಂಗ್ ಅವರನ್ನು ಸುತ್ತಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪರಮ್ಬೀರ್ ಸಿಂಗ್ ನನ್ನ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ" ಎಂದಿದ್ದಾರೆ.