ಮಸ್ಕಿ, ಮಾ.21 (DaijiworldNews/PY): "ಬಿಜೆಪಿ ಗೆಲ್ಲುವ ಪಕ್ಷ, ಕಾಂಗ್ರೆಸ್ ಸೋಲುವ ಪಕ್ಷವಾಗಿದೆ. ಎಲ್ಲಿಯೂ ನಿಲ್ಲದ ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷಕ್ಕೆ ತಿಂಗಳಲ್ಲಿ ರಾಜೀನಾಮೆ ನೀಡಲಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಒಳಜಗಳದ ಪಕ್ಷವಾಗಿದೆ. ಕಾಂಗ್ರೆಸ್ ಸೋಲುವ ಪಕ್ಷವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಪಕ್ಷ ಇದೀಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಕಾರಣದಿಂದ ಅವರು ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ಹಾಗಾಗಿ ಅವರು 90 ಜೊತೆ ಬಟ್ಟೆ ಹೊಲಿಸಿಕೊಂಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಕೃಷ್ಣನಂತೆ ಸಾರಥಿಯಾಗಿದ್ದು, ಬಿ.ವೈ.ವಿಜಯೇಂದ್ರ ಅರ್ಜುನ, ಶ್ರೀರಾಮುಲು ಅವರು ಭೀಮ ಹಾಗೂ ಸಹದೇವನಾಗಿ ಎನ್.ರವಿಕುಮಾರ್ ಇದ್ದಾರೆ. ಈ ಕುರುಕ್ಷೇತ್ರದ ಕದನದಲ್ಲಿ ಪಾಂಡವರಿಗೆ ವಿಜಯ ದೊರೆಯುವುದು ನಿಶ್ಚಿತ" ಎಂದಿದ್ದಾರೆ.