ವಿಜಯಪುರ, ಮಾ.20 (DaijiworldNews/MB) : ''ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಖಂಡಿತವಾಗಿಯೂ ಆಗುತ್ತದೆ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಶನಿವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಉತ್ತರಾಖಂಡದಲ್ಲಿ ಹೇಗೆ ಮುಖ್ಯಮಂತ್ರಿ ಬದಲಾವಣೆ ಆಗಿದೆಯೋ ಅದೇ ರೀತಿ ಕರ್ನಾಟಕ ಹಾಗೂ ಹರಿಯಾಣ ಸಿಎಂ ಬದಲಾವಣೆ ಆಗಲಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರದಲ್ಲೇ ಯಡಿಯೂರಪ್ಪ ಮುಳುಗಿದ್ದಾರೆ'' ಎಂದು ದೂರಿದರು.
''ಯಡಿಯೂರಪ್ಪನಂತವರ ದೈರ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಾಗದು. ಇವರು ಮುಖ್ಯಮಂತ್ರಿ ಆಗಿದ್ದರೆ ದಕ್ಷಿಣ ಭಾರತದಲ್ಲಿಯೇ ಬಿಜೆಪಿಯ ಕೊನೆಯ ಮುಖ್ಯಮಂತ್ರಿ ಇವರು ಎಂದಾಗುತ್ತದೆ. ಇನ್ನೂ ಹಲವಾರು ಮಂದಿ ಬಿಜೆಪಿಯಿಂದ ಮುಖ್ಯಮಂತ್ರಿ ಆಗಬೇಕು'' ಎಂದು ಹೇಳಿದರು.
''ಶಾಸಕಾಂಗ ಪಕ್ಷದ ಸಭೆ ಕರೆಯುವ ಮನಸ್ಸು ಯಡಿಯೂರಪ್ಪಗೆ ಇಲ್ಲ. ಅವರ ಉದ್ದೇಶವೇ ಬೇರೆ. ತಮ್ಮನ್ನು ಅಧಿಕಾರಕ್ಕೆ ತಂದ ಬಿಜೆಪಿ ಶಾಸಕರನ್ನು ಕಡೆಗಣಿಸಿರುವ ಬಿಎಸ್ವೈ, ಬಿಜೆಪಿಯ 38 ಶಾಸಕರಿಗೆ ಮಾತ್ರ ಅನುದಾನ ನೀಡಿದ್ದಾರೆ. ಆದರೆ ಕಾಂಗ್ರೆಸ್ನ 40 ಶಾಸಕರಿಗೆ ಅನುದಾನ ನೀಡಿದ್ದಾರೆ'' ಎಂದು ದೂರಿದರು.