ನವದೆಹಲಿ, ಮಾ.20 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಪ್ರತಿಭಟಿಸುತ್ತಿರುವ ರೈತರ ಪರವಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ''ಕೃಷಿ ವಿರೋಧಿ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. 56 ಬಿಡಿ, ನಾವು ಒಂದು ಇಂಚು ಸಹ ಹಿಂದಕ್ಕೆ ಸರಿಯಲಾರೆವು'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡರು ಹಾಗೂ ಸರ್ಕಾರದ ನಡುವೆ ಹಲವು ಹಂತಗಳ ಮಾತುಕತೆ ನಡೆದಿದ್ದರೂ ಕೂಡಾ ಯಾವುದೇ ಮಾತುಕತೆ ಸಫಲವಾಗಿಲ್ಲ. ಅತ್ತ ರೈತ ಮುಖಂಡರು ಈ ಕಾಯ್ದೆಗಳನ್ನು ರದ್ದು ಮಾಡಲೇಬೇಕು ಎಂದು ಒತ್ತಾಯಿಸಿದರೆ ಇತ್ತ ಸರ್ಕಾರ ಯಾವುದೇ ಕಾರಣಕ್ಕೂ ಈ ಕಾಯ್ದೆಗಳನ್ನು ರದ್ದು ಮಾಡಲಾಗದು ಬೇಕಾದರೆ ಕೆಲವು ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದೆ.