ಚಿತ್ರದುರ್ಗ, ಮಾ. 20 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರಿ ವಲಯದ ಉದ್ದಿಮೆಗಳನ್ನು ಖಾಸಗಿ ಕಂಪನಿಗಳ ಮಾಲಿಕತ್ವಕ್ಕೆ ಒಪ್ಪಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೂ ಹಾಗೂ ನೂರಾರು ವರ್ಷ ದೇಶವನ್ನು ಆಳಿದ ಈಸ್ಟ್ ಇಂಡಿಯಾ ಕಂಪನಿಗೂ ವ್ಯತ್ಯಾಸವಿಲ್ಲ" ಎಂದರು.
ಇನ್ನು ಕೇಂದ್ರ ಸರ್ಕಾರವು ಅನೇಕ ತಪ್ಪು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಇಡೀ ದೇಶವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಬಿಜೆಪಿ, ಕೃಷಿ ವಲಯಕ್ಕೆ ಮೊದಲು ಕೈಹಾಕಿದ್ದು, ಮೂರು ವಿವಾದಿತ ಕೃಷಿ ಮಸೂದೆಗಳನ್ನು ಕಾರ್ಪೊರೇಟ್ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಲಾಗಿದ್ದು, ರೈತರೊಂದಿಗೆ ಚರ್ಚಿಸಲು ಸಮಯ ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ ಚುನಾವಣೆ ನಡೆಸುತ್ತಿದೆ" ಎಂದು ಆರೋಪಿಸಿದ್ದಾರೆ.