ನವದೆಹಲಿ,ಮಾ 20(DaijiworldNews/MS): ನವವಿವಾಹಿತ ಕ್ರಿಕೆಟರ್ ಜಸ್ಪ್ರೀತ್ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಕೇವಲ ಎರಡು ಪೋಟೋಗಳು.
ಇತ್ತೀಚೆಗೆ ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದ ಜಸ್ಪ್ರೀತ್ ಬುಮ್ರಾ ಅವರು ಶುಕ್ರವಾರ ತಮ್ಮ ಪತ್ನಿಯೊಂದಿಗಿರುವ ಒಂದೆರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಷ್ಟೇ ಆಗಿದ್ದರೆ ನೆಟ್ಟಿಗರು ಸುಮ್ಮನಿರುತ್ತಿದ್ದರೇನೋ..ಆದರೆ ಇದಕ್ಕೆಲ್ಲಾ ಕಾರಣವಾಗಿದ್ದು ಪಟಾಕಿ ಅಂದರೆ ತಪ್ಪಾಗಲಾರದು.
ಕಳೆದ ಬಾರಿ ದೀಪಾವಳಿ ಶುಭಾಶಯ ಹೇಳುವಾಗ ಪ್ಯಾಮಿಲಿ ಪೋಟೋ ಶೇರ್ ಮಾಡಿ ಟ್ರೆಂಡ್ನಲ್ಲಿದ್ದ #saynotocrackers ಹ್ಯಾಷ್ ಟ್ಯಾಗ್ ಬಳಸಿದ್ದರು. ಆದರೆ ಶುಕ್ರವಾರ ಹಚಿಂಕೊಂಡಿದ್ದ ನವದಂಪತಿಯ ಆಕರ್ಷಕ ಪೋಟೋದಲ್ಲಿ ಬುಮ್ರಾ ಮತ್ತು ಸಂಜನಾ ಜೊತೆಯಾಗಿ ನಡೆಯುತ್ತಿದ್ದರೆ ಸುತ್ತ ನಿಂತಿದ್ದವರು ನಕ್ಷತ್ರ ಕಡ್ಡಿ ಹಚ್ಚಿ ನವ ಜೋಡಿಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದರು. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಬೇಡಿ ಎಂದು ಹ್ಯಾಷ್ಟ್ಯಾಗ್ ಬಳಸಿದ್ದ ಬುಮ್ರಾ ತನ್ನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯತೊಡಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹ್ಯಾಕರ್ ಅಂಶುಲ್ ಸಕ್ಸೇನಾ ಸಂಸದೆ ಶೋಭಾ ಕರಂದ್ಲಾಜೆ, ಪಟಾಕಿ ಬೇಡ ಎಂದು ದೀಪಾವಳಿ ಸಮಯದಲ್ಲಿ ಮಾತ್ರ ಹೇಳಿದರೆ ಸಾಕೆ? ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಮತ್ತಷ್ಟು ನೆಟ್ಟಿಗರು ಜಸ್ಪ್ರೀತ್ ಬುಮ್ರಾ ಯಾವ ನೀತಿ ಪಾಠ ಮಾಡುತ್ತೀರೋ ಅದನ್ನು ಮೊದಲು ಅನುಸರಿಸುವುದನ್ನೂ ಕಲಿಯಿರಿ, ಹೇಳೋದೊಂದು ಮಾಡೋದೊಂದು ಎಂದು ಮಾತಿನ ಚಾಟಿಯೇಟು ಕೊಟ್ಟಿದ್ದಾರೆ.