ಕೋಲ್ಕತಾ, ಮಾ.19 (DaijiworldNews/HR): ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವೇ ನಿಮಿಷದಲ್ಲಿ ಕೋಲ್ಕತಾದ ಚೌರಿಂಗೀ ಕ್ಷೇತ್ರದಿಂದ ಪಕ್ಷದಿಂದ ಟಿಕೆಟ್ ಪಡೆದಿರುವ ಶಿಖಾ ಮಿತ್ರಾ ತನ್ನ ಒಪ್ಪಿಗೆ ಪಡೆಯದೇ ನನ್ನ ಹೆಸರನ್ನು ಪ್ರಕಟಿಸಲಾಗಿದೆ ಎಂದು ಅವರು ದೂರಿದ್ದಾರೆ.
ಶಿಖಾ ಮಿತ್ರಾ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಮಾರ್ಚ್ 27ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ನನ್ನ ಅನುಮತಿ ಇಲ್ಲದೆ ಹೆಸರನ್ನು ಪ್ರಕಟಿಸಲಾಗಿದೆ. ಜೊತೆಗೆ ನಾನು ಬಿಜೆಪಿಯನ್ನು ಸೇರಿಲ್ಲ ಎಂದಿದ್ದಾರೆಂದು ವರದಿಯಾಗಿದೆ.
ಶಿಖಾ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಈ ಭೇಟಿಯ ಬಳಿಕ ಅವರು ಬಿಜೆಪಿ ಸೇರಿದ್ದಾರೆಂಬ ಕುರಿತು ಮಾತು ಸುದ್ದಿಯಾಗಿತ್ತು.
ಇನ್ನು ತೃಣಮೂಲ ಕಾಂಗ್ರೆಸ್ ಮಾಜಿ ನಾಯಕರಿಗೆ ಟಿಕೆಟ್ ನೀಡಿ ಕಾರ್ಯಕರ್ತರಿಂದ ಆಕ್ರೋಶ ಎದುರಿಸುತ್ತಿರುವ ಬಿಜೆಪಿಗೆ ಇದು ತೀವ್ರ ಮುಜುಗರ ತಂದಿದೆ ಎನ್ನಲಾಗಿದೆ.