ಮೈಸೂರು,ಮಾ.19 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮನೆ ಹಾಳು ಮಾಡಿದ ಮಹಾನ್ ನಾಯಕ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದ್ದು, ಶೀಘ್ರದಲ್ಲೇ ಆ ಮಹಾನ್ ನಾಯಕ ಯಾರು ಎಂಬುದು ಗೊತ್ತಾಗಲಿದೆ" ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಆದರೆ ಮಹಾನ್ ನಾಯಕ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರಿದ್ದಾರೆ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು" ಎಂದು ಟೀಕಿಸಿದ್ದಾರೆ.
"ಇಂತಹ ಸಿ.ಡಿ ಮಾಡಿ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಂಚಿ ಮನೆ ಮನಗಳನ್ನು ಮುರಿದಿದ್ದಾರೆ. ಇಂತಹ ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ" ಎಂದಿದ್ದಾರೆ.
ಇನ್ನು "ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಯಾಗಬೇಕು ಆದರೆ ಇವೆಲ್ಲದಕ್ಕಿಂತ ಹೆಚ್ಚಾಗಿ ಅನಗತ್ಯ ವಿಷಯಗಳ ಚರ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಸದನಲ್ಲಿ ಪಾಲ್ಗೊಳ್ಳಲು ಬೇಸರವಾಗುತ್ತದೆ" ಎಂದು ಹೇಳಿದ್ದಾರೆ.