ಬೆಂಗಳೂರು,ಮಾ.19 (DaijiworldNews/HR): ಸಚಿವ ಸುಧಾಕರ್ ಅವರ ಗನ್ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಉರುಳಾಡಿಕೊಂಡು ಕಿತ್ತಾಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವರ ಮನೆಯ ಮುಂದೆ ನಡೆದಿದೆ.
ಈ ಘಟನೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಡ್ರೈವರ್ ಸೋಮಶೇಖರ್, "ಗುರುವಾರದಂದು ಟೀ ಮಾರುವ ಅಂಗವಿಕಲನ ಮೇಲೆ ತಿಮ್ಮಯ್ಯ ಹಲ್ಲೆ ನಡೆಸಿದ್ದಾನೆ. ಹೀಗಾಗಿ ನಾವು ಎಲ್ಲರೂ ಆತನ ವಿರುದ್ಧ ಬೇಸರ ವ್ಯಕ್ತಪಡಿಸಿದೆವು. ಅಲ್ಲದೆ ಈ ವಿಚಾರವನ್ನು ಎಲ್ಲೂ ಕೂಡ ನಾವು ಬಹಿರಂಗ ಪಡಿಸಿಲ್ಲ. ಆದರೂ ತಿಮ್ಮಯ್ಯ ಸಚಿವರಿಗೆ ಹಾಗೂ ಮೇಡಂಗೆ ಹೇಳಿದ್ದೇನೆ ಎಂದು ಭಾವಿಸಿ ಭಯದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ" ಎಂದು ಆರೋಪಿಸಿದ್ದಾರೆ.
ಇನ್ನು ಆ ಅಂಗವಿಕಲ ಸಚಿವರಿಗೆ ದೂರು ನೀಡುವುದಾಗಿ ಮೂರು ಬಾರಿ ಬಂದಿದ್ದಾನೆ. ಆದರೆ ನಾನು ಹಾಗೂ ಪೊಲೀಸರು ಬೇಡಪ್ಪ ಹೋಗು ಎಂದು ಕಳುಹಿಸಿದ್ದೇವೆ. ತಪ್ಪು ಮಾಡಿಲ್ಲ ಎಂದರೆ ಏಕೆ ಭಯ ಪಡಬೇಕು ಎಂದು ಪ್ರಶ್ನಿಸುತ್ತಾ, ಅನುಮಾನಗೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸೋಮಶೇಖರ್, ತಿಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಲ್ಲಿ ಸದ್ಯ ಡ್ರೈವರ್ ಸೋಮಶೇಖರ್ ಮೊಣಕೈಗೆ ಹಾನಿಯಾಗಿದೆ ಎನ್ನಲಾಗಿದೆ.