ಬೆಂಗಳೂರು, ಮಾ.19 (DaijiworldNews/PY): ರಾಮಮಂದಿರ ಅಭಿಯಾನದ ವೇಳೆ ನಿಧಿ ನೀಡದೇ ಇರುವ ಮನೆಗಳನ್ನು ಗುರುತಿಸುವ ಸಂಸ್ಕೃತಿ ನಮ್ಮದಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಆರ್ಎಸ್ಎಸ್, "ಇಡೀ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ" ಎಂದಿದ್ದಾರೆ.
ಚನ್ನೇಹಳ್ಳಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಎಸ್ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್, "ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನದ ಸಂದರ್ಭ ದೇಶದಲ್ಲಿ ಸುಮಾರು 12 ಕೋಟಿಗೂ ಅಧಿಕ ಪರಿವಾರಗಳನ್ನು ತಲುಪಿದ್ದೆವೆ. ಅಧಿಕ ಸಂಖ್ಯೆಯಲ್ಲಿ ಮನೆಗಳನ್ನು ತಲುಪುವ ಉದ್ದೇಶವನ್ನು ಹೊಂದಿದ್ದು, ಬದಲಾಗಿ ಹೆಚ್ಚು ಹಣ ಸಂಗ್ರಹ ಮಾಡುವ ಉದ್ದೇಶವಿಲ್ಲ. ಹಣ ನೀಡದ ಮನೆಗಳನ್ನು ಗುರುತಿಸಿ ಟಾರ್ಗೆಟ್ ಮಾಡುತ್ತಿಲ್ಲ. ನಾವು ಇಡೀ ಸಮಾಜವನ್ನು ಒಗ್ಗೂಡಿಸು ಕಾರ್ಯವನ್ನು ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ರಾಮಮಂದಿರ ನಿರ್ಮಾಣಕ್ಕೆ ನಿಧಿ ನೀಡದ ಮನೆಗಳನ್ನು ಗುರುತಿಸಿ ಆರ್ಎಸ್ಎಸ್ ಸ್ವಯಂಸೇವಕರು ಟಾರ್ಗೆಟ್ ಮಾಡುತ್ತಿದ್ದಾರೆ" ಎಂದು ಇತ್ತೀಚೆಗೆ ಹೆಚ್ಡಿಕೆ ಹೇಳಿದ್ದು, ಈ ಹೇಳಿಕೆ ಭಾರೀ ವಿವಾದ ಸೃಷ್ಟಿ ಮಾಡಿತ್ತು.