ನವದೆಹಲಿ, ಮಾ.19 (DaijiworldNews/MB) : ''ದೇಶಬಿಟ್ಟು ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಕಾನೂನನ್ನು ಎದುರಿಸಲು ಭಾರತಕ್ಕೆ ವಾಪಾಸ್ ಬರಲಿದ್ದಾರೆ'' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಿಮಾ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ನಿರ್ಮಲಾ ಅವರು, ''ಬ್ರಿಟನ್ನಿಂದ ಭಾರತಕ್ಕೆ ವಿಜಯ್ ಮಲ್ಯ ಮತ್ತು ನೀರವ್ ಮೋದಿಯನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಚೋಕ್ಸಿ ಆಂಟಿಗುವಾದಲ್ಲಿದ್ದಾರೆ ಎಂದು ಹೇಳಲಾಗಿದೆ. ದೇಶದ ಕಾನೂನು ಪ್ರಕಾರ ಹಣಕಾಸು ವಂಚನೆ ಹಿನ್ನೆಲೆ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಕ್ರಮ ಎದುರಿಸಲಿದ್ದಾರೆ'' ಎಂದು ಹೇಳಿದರು.
''ಆರೋಪಿ ವಿಜಯ್ ಮಲ್ಯ ಅವರು 2016 ರ ಮಾರ್ಚ್ನಿಂದ ಬ್ರಿಟನ್ನಲ್ಲಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆ ನೀರವ್ ಮೋದಿ ಮತ್ತು ಅವರ ಮಾವ ಚೋಕ್ಸಿ ದೇಶಬಿಟ್ಟು ಪರಾರಿಯಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಮೋದಿ ಸುಮಾರು 14,500 ಕೋಟಿ ವಂಚನೆ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.