ಬೆಂಗಳೂರು, ಮಾ 19 (DaijiworldNews/MS): ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಯಂತೆ ಬಿಜೆಪಿಯೂ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ‘ಒಂದು ರಾಷ್ಟ್ರ ಒಂದು ಗೋ ಹತ್ಯೆ ನಿಷೇಧ ಕಾನೂನು’ ಜಾರಿಗೆ ತರಲಿ ಎಂದು ಯು.ಟಿ. ಖಾದರ್ ಸರಕಾರಕ್ಕೆ ವಿಡಂಬನೆ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವರು, ಯಾವ ರೀತಿಯಲ್ಲಿ ಕರ್ನಾಟಕದಲ್ಲಿ ಜಾರಿಗೆ ತಂದರೋ ಅದರಂತೆ ಬೇರೆ ಬೇರೆ ರಾಜ್ಯದಲ್ಲೂ ಬಿಜೆಪಿಯೂ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ ಎಂದು ಸವಾಲು ಹಾಕಿದ್ದಾರೆ.
ನೀವು ಕರ್ನಾಟಕ ರಾಜ್ಯಕ್ಕೆ ಒಂದು ರೀತಿಯ ಕಾನೂನು, ಕೇರಳದಲ್ಲಿ ಚುನಾವಣೆ ಬಂದರೆ ಮತ್ತೊಂದು ರೀತಿಯ ಕಾನೂನು, ಇನ್ನು ಗೋವಾಕ್ಕೆ ಒಂದು ರೀತಿಯ ಕಾನೂನು ಜಾರಿಗೆ ತರುತ್ತೀರಿ. ನಿಮಗೆ ನಿಜವಾಗಲೂ ಗೋವಿನ ಬಗ್ಗೆ ಭಾವನಾತ್ಮಕ ನಂಬಿಕೆ ಇದ್ದರೆ, ಇಡೀ ದೇಶದಲ್ಲಿ ಗೋ ಮಾಂಸ ನಿಷೇಧ ಮಾಡಿ ಎಂದರು. ಅಲ್ಲದೇ, ಗೋ ಮಾಂಸ ರಫ್ತು ಕೂಡಾ ನಿಲ್ಲಿಸಿ ಎಂದರು.
“ಇನ್ನು ನಮ್ಮ ಸರಕಾರ ಜಾರಿಗೆ ತಂದ ಪಶು ಭಾಗ್ಯ ಯೋಜನೆಯನ್ನು ನಿಲ್ಲಿಸಿದ್ದೀರಿ. ಇದರಿಂದ ಗೋ ಸಂತತಿ ಕಡಿಮೆಯಾಗುತ್ತಿದೆ”. ಮತ್ತೇ ಪಶು ಭಾಗ್ಯ ಯೋಜನೆ ಜಾರಿಗೆ ತರುವಂತೆ ಯುಟಿ ಖಾದರ್ ಒತ್ತಾಯಿಸಿದರು.