ನವದೆಹಲಿ, ಮಾ. 18 (DaijiworldNews/SM): ಜನಸಾಮಾನ್ಯರು ಹಾಗೂ ಹೆದ್ದಾರಿ ಪ್ರಾಧಿಕಾರಗಳ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಘರ್ಷಣೆಗಳು ನಡೆಯುತ್ತಿದ್ದು, ಈ ನಡುವೆ ಫಾಸ್ಟ್ ಟ್ಯಾಗ್ ಅಳವಡಿಸಿದ ಬಳಿಕ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ವರ್ಷದೊಳಗೆ ಟೋಲ್ ಗೇಟ್ ಗಳನ್ನು ರದ್ದುಗೊಳಿಸಲಾಗುವುದೆಂದು ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಜನಸಾಮಾನ್ಯರಲ್ಲಿ ಮಂದಹಾಸ ಮೂಡಿದೆ.
ಹೆದ್ದಾರಿ ಪ್ರಾಧಿಕಾರದ ಸಚಿವರು ಹೇಳಿದ್ದೇನು?
ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸಚಿವ ನಿತಿನ್ ಗಡ್ಕರಿ ಮುಂದಿನ ಒಂದು ವರ್ಷದೊಳಗೆ ದೇಶದೆಲ್ಲೆಡೆ ಇರುವ ಟೋಲ್ ಗೇಟ್ ಗಳನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ. ಇದರ ಬದಲು, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದ್ದು, ಆ ಮೂಲಕ ಜನಸಾಮಾನ್ಯರು ಎಷ್ಟು ದೂರ ಕ್ರಮಿಸುತ್ತಾರೆ ಅದರ ಆಧಾರದಲ್ಲಿ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇವುಗಳನ್ನು ಮೋನಿಟರಿಂಗ್ ಮಾಡಲು ಕ್ಯಾಮರಾಗಳನ್ನು ಅಳವಡಿಸಲಾಗುವುದೆಂದರು.
ವರವಾಗಲಿದೆಯಾ? ಹೊರೆಯಾಗಲಿದೆಯಾ?
ಹೆದ್ದಾರಿ ಸಚಿವರು ಹೇಳುವ ಪ್ರಕಾರ ಹೊಸ ನಿಯಮವನ್ನು ಜನಸಾಮಾನ್ಯರಿಗೆ ವರವಾಗುವ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದೆ. ಜನಸಾಮಾನ್ಯರು ಹೆಚ್ಚಿನ ಶುಲ್ಕ ಪಾವತಿಯಿಂದ ವಂಚಿಸಿತರಾಗಲಿದ್ದಾರೆ. ಎಷ್ಟು ದೂರ ಕ್ರಮಿಸುತ್ತಾರೆ ಅದರ ಆಧಾರದಲ್ಲೇ ಶುಲ್ಕ ಪಾವತಿಯಾಗಲಿದೆ ಎಂದಿದ್ದಾರೆ. ಆದರೆ, ಈ ಹೊಸ ವಿಧಾನ ಜಾರಿಗೆ ತರಲು ಸರಕಾರ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರಚಿಸಿರುವ ಟೋಲ್ ಗಳಿಗೆ ದುಬಾರಿ ವೆಚ್ಚವನ್ನು ಕೂಡ ಮಾಡಲಾಗಿದೆ. ಒಂದು ಹಂತದಲ್ಲಿ ಅದು ಕೂಡ ವ್ಯರ್ಥವಾಗಲಿದೆ. ಆದರೆ, ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಜಾರಿಗೆ ತರಲಿದ್ದಾರೆ ಎಂಬುವುದು ಕುತೂಹಲ ಕೆರಳಿಸಿದೆ.