ಕೋಲ್ಕತ್ತಾ, ಮಾ18 (DaijiworldNews/MS): ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಗೆ 5,6,7 ಮತ್ತು 8 ನೇ ಸುತ್ತಿನ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದ, ಬ್ಯಾನರ್ಜಿ ಅವರಿಗೆ ಅತ್ಯಾಪ್ತರಾಗಿದ್ದ , ಇದೀಗ ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಕೃಷ್ಣನಗರ ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.ಅವರ ವಿರುದ್ಧ ಟಿಎಂಸಿಯಿಂದ ನಟಿ ಕೌಶಾನಿ ಮುಖರ್ಜಿ ಸ್ಪರ್ಧಿಸಲಿದ್ದಾರೆ.
ರಾಹುಲ್ ಸಿನ್ಹಾ ಮತ್ತು ಅಸೀಮ್ ಸರ್ಕಾರ್ ಸೇರಿದಂತೆ ಈ ಪಟ್ಟಿಯಲ್ಲಿ ಕೆಲವು ಪ್ರಮುಖ ಮುಖಗಳ ಹೆಸರು ಇವೆ. ಜತೆಗೆ ಇದರಲ್ಲಿ 11 ಶಾಸಕರು ಮತ್ತು ಒಬ್ಬ ಸಂಸದರ ಹೆಸರೂ ಇದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ 148 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಹಾಗೂ ಪಕ್ಷದ ಇತರೆ ಹಿರಿಯ ನಾಯಕರು ಭಾಗವಹಿಸಿದ್ದರು.
ರಾಹುಲ್ ಸಿನ್ಹಾ ಅವರು ಅದ್ರಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮೊದಲ ನಾಲ್ಕು ಹಂತಗಳ ಚುನಾವಣೆಗೆ ಈಗಾಗಲೇ 112 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಸಂಸದರಾದ ಬಾಬುಲ್ ಸುಪ್ರಿಯೋ, ಲಾಕೆಟ್ ಚಟರ್ಜಿ, ಸ್ವಪನ್ ದಾಸ್ಗುಪ್ತಾ ಮತ್ತು ನಿತೀಶ್ ಪ್ರಾಮಾಣಿಕ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್, ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. 'ನನ್ನ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವುದಿಲ್ಲ. ರಾಜ್ಯ ಮುಖ್ಯಸ್ಥನಾಗಿ ನನ್ನ ಉಸ್ತುವಾರಿಯಲ್ಲಿ ಚುನಾವಣಾ ಪ್ರಚಾರಗಳನ್ನು ನಡೆಸುವಂತೆ ಪಕ್ಷ ತೀರ್ಮಾನಿಸಿದೆ' ಎಂದು ಅವರು ಹೇಳಿದ್ದಾರೆ.