ಕೋಲ್ಕತ್ತ, ಮಾ.18 (DaijiworldNews/PY): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು, "ಪಶ್ಚಿಮಬಂಗಾಳದೊಳಗೆ ಪ್ರತೀಕಾರದ ರಾಜಕಾರಣಕ್ಕೆ ಪ್ರವೇಶಕ್ಕೆ ಅವಕಾಶವಿಲ್ಲ" ಎಂದಿದ್ದಾರೆ.
ಗುರುವಾರ ಪಶ್ಚಿಮ ಮೇದಿನಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ನಾಯಕರು ಹೆಲಿಕಾಫ್ಟರ್ಗಳು ಹಾಗೂ ವಿಮಾನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದಾರೆ. ಮತದಾರರಿಗೆ ಆಮಿಷವೊಡ್ಡಲು ಹಾಗೂ ಮತಗಳನ್ನು ಲೂಟಿ ಮಾಡುವ ಸಲುವಾಗು ದುಡ್ಡು ತುಂಬಿದ ಚೀಲದೊಂದಿಗೆ ಬರುತ್ತಿದ್ದಾರೆ" ಎಂದು ದೂರಿದ್ದಾರೆ.
"ಬಿಜೆಪಿ ದಂಗೆಕೋರರ ಪಕ್ಷ. ಆದರೆ, ನಾವು ಹಿಂಸೆ ಹಾಗೂ ರಕ್ತಪಾತಗಳನ್ನು ಇಚ್ಛಿಸುವುದಿಲ್ಲ. ಚುನಾವಣೆಯ ಸಂದರ್ಭ ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಲೂಟಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ರಾಜ್ಯ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಸಂದರ್ಭ ಅವರು ಗೈರಾಗಿದ್ದರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಟಿಎಂಸಿ ಸರ್ಕಾರ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ ನೀಡಿದೆ. ಜನರು ಸಂಕಷ್ಟದಲ್ಲಿದ್ದ ವೇಳೆ ಅವರಿಗೆ ನಾವು ನೆರವಾಗಿದ್ದೇವೆ. ಆದರೆ, ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು?" ಎಂದು ಪ್ರಶ್ನಿಸಿದ್ದಾರೆ.
294 ವಿಧಾನಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಎಪ್ರಿಲ್ 1, ಎಪ್ರಿಲ್ 6, ಎಪ್ರಿಲ್ 10, ಎಪ್ರಿಲ್ 17, ಎಪ್ರಿಲ್ 22, ಎಪ್ರಿಲ್ 26 ಹಾಗೂ ಎಪ್ರಿಲ್ 29 ರಂದು ಮತದಾನ ನಡೆಯಲಿದೆ.