ಬೆಂಗಳೂರು, ಮಾ.18 (DaijiworldNews/HR): ಆರು ಲಕ್ಷ ರೂ.ಗೆ ಕುಟುಂಬದವರಿಂದಲೇ ಸುಪಾರಿ ಪಡೆದು ವಾಹನ ಚಲಾಯಿಸಿ ವ್ಯಾಪಾರಿಯನ್ನು ಹತ್ಯೆ ಮಾಡಿ ಅಪಘಾತವೆಂಬಂತೆ ಬಿಂಬಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವೈಟ್ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಅನಿಲ್ಕುಮಾರ್ ಎಂದು ಗುರುತಿಸಲಾಗಿದೆ.
ಜನವರಿ 21ರಂದು ರಾತ್ರಿ ಗುಂಜೂರು ನಿವಾಸಿ ಜಿ.ಎಸ್.ದೇವರಾಜ್ ಎಂಬುವರು ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ತಂದೆ ಸುಬ್ಬರಾಯಪ್ಪ (58) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಬ್ಬರಾಯಪ್ಪ ಅವರು ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪರಿಚಿತ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.
ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಅಪಘಾತ ನಡೆದ ಸ್ಥಳದ ಪರಿಶೀಲನೆಯಿಂದ ಅಪಘಾತವಾಗಿರುವ ರಸ್ತೆಯಲ್ಲಿ ರಸ್ತೆ ಉಬ್ಬುಗಳು ಇದ್ದು, ಅಲ್ಲಿ ಅಪಘಾತವಾಗುವ ಸಂಭವ ಬಹಳ ಕಡಿಮೆ ಎಂಬುದು ಗೊತ್ತಾಗಿದ್ದು, ಪೊಲೀಸರು ಸ್ಥಳೀಯರು ಹಾಗೂ ಮೃತರ ಸಂಬಂಧಿಕರ ಹೇಳಿಕೆಗಳನ್ನು ಪಡೆದು ಪರಿಶೀಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡ ವೇಳೆ ಸಂಬಂಧಿಕರು ನೀಡುತ್ತಿದ್ದ ಸಂಶಯಾಸ್ಪದ ಹೇಳಿಕೆಗಳಿಂದ ಈ ಪ್ರಕರಣವು ಹತ್ಯೆ ಎಂಬ ಸಂಶಯ ವ್ಯಕ್ತವಾಗಿದೆ.
ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇಲ್ಲದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿ ಸ್ಥಳದ ಸಮೀಪವಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸಿದಾಗ ನಂಬರ್ ಇಲ್ಲದ ರೇವಾ ಕಾರ್ಸ್ ಸೆಲ್ಫ್ ಡ್ರೈವಿಂಗ್ ಕಂಪೆನಿಗೆ ಸೇರಿದ ಮಹೀಂದ್ರ ಸ್ಕಾರ್ಪಿಯೋ ವಾಹನ ಅತಿವೇಗವಾಗಿ ಹಾದು ಹೋಗಿರುವುದು ಕಂಡುಬಂದಿದ್ದು, ತನಿಖೆ ವೇಳೆ ಸುಬ್ಬರಾಯಪ್ಪ ಅವರಿಗೆ ಅವರೇಕಾಳು ವ್ಯಾಪಾರದ ಸಂಬಂಧ ವ್ಯಕ್ತಿಯೊಬ್ಬರು ಮೊಬೈಲ್ಗೆ ಕರೆ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಮೃತರ ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಕೊನೆಗೆ ಬಂದಿರುವ ಕರೆಯ ನಂಬರ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ ಎನ್ನಲಾಗಿದೆ.
ಈ ಪ್ರಕರಣವು ಕೇವಲ ಮಾರಣಾಂತಿಕ ಅಪಘಾತವಾಗಿರದೆ ಪೂರ್ವ ನಿಯೋಜಿತ ಅಪಘಾತವೆಂದು ಅನುಮಾನಗೊಂಡು ಸ್ಕಾರ್ಪಿಯೋ ವಾಹನವನ್ನು ಬಾಡಿಗೆಗೆ ಪಡೆದಿದ್ದ ಹಾಗೂ ಮೃತರಿಗೆ ಕೊನೆಯ ಕರೆ ಮಾಡಿದ ಗ್ರಾಹಕ ಅನಿಲ್ ಕುಮಾರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಅನಿಲ್ಕುಮಾರ್ ಪೊಲೀಸರ ಮುಂದೆ ಸತ್ಯಾಂಶ ಬಾಯಿ ಬಿಟ್ಟಿದ್ದು, ಸುಬ್ಬರಾಯಪ್ಪ ಅವರನ್ನು ಕೊಲೆ ಮಾಡಲು ಅವರ ಕುಟುಂಬದವರೇ 6 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರೆಂದು ಹೇಳಿದ್ದಾನೆ ಎನ್ನಲಾಗಿದೆ.