ನವದೆಹಲಿ, ಮಾ.18 (DaijiworldNews/PY): "ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದಲ್ಲಿ ದೆಹಲಿಯ ಪ್ರತಿಯೊಬ್ಬರಿಗೂ ಮೂರು ತಿಂಗಳಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
"ದೇಶದದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ 18ಕ್ಕಿಂತ ಹೆಚ್ಚಿನ ವರ್ಷದ ಪ್ರತಿಯೋರ್ವರಿಗೂ ಕೊರೊನಾ ಲಸಿಕೆ ಹಾಕಲು ಅನುಮತಿ ನೀಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
"ಕೊರೊನಾ ಲಸಿಕೆಯನ್ನು ಪ್ರತಿಯೋರ್ವರಿಗೆ ನೀಡುವಂತಾದರೆ ಸೋಂಕು ನಿಯಂತ್ರಣ ಮಾಡಬಹುದು. ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ದೆಹಲಿಯ ಪ್ರತಿಯೊಬ್ಬರಿಗೂ ಮೂರು ತಿಂಗಳೊಳಗೆ ಲಸಿಕೆ ಹಾಕಲಾಗುತ್ತದೆ. ಕರ್ನಾಟಕ, ಕೇರಳ ಸೇರಿದಂತೆ ಮಹಾರಾಷ್ಟ್ರ, ಪಂಜಾಬ್, ದೆಹಲಿಯಲ್ಲೂ ಕೂಡಾ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ" ಎಂದಿದ್ದಾರೆ.
"ನಿತ್ಯ ಸುಮಾರು 30,000-40,000 ಲಸಿಕೆಯನ್ನು ನೀಡಲಾಗುತ್ತಿದ್ದು, ಇದರ ಸಂಖ್ಯೆಯನ್ನು1.25 ಲಕ್ಷಕ್ಕೆ ಏರಿಕೆ ಮಾಡಬೇಕು. ಮುಂಬರುವ ದಿನಗಳಲ್ಲಿ ಲಸಿಕೆಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ಕೊರೊನಾ ಲಸಿಕೆ ಪಡೆದುಕೊಳ್ಳಲು ಯಾವುದೇ ಹಿಂಜರಿಕೆ ಮಾಡಬೇಡಿ. ನಾನು ಹಾಗೂ ನನ್ನ ಹೆತ್ತವರು ಕೊರೊನಾ ಲಸಿಕೆ ಪಡೆದಿದ್ದೇವೆ. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದಿದ್ದಾರೆ.
ಗುರುವಾರ ದೇಶದಲ್ಲಿ 35,871 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಈ ವರ್ಷದ ಗರಿಷ್ಠ ಪ್ರಕರಣವಾಗಿದೆ.