ಚಂಡೀಗಢ, ಮಾ.18 (DaijiworldNews/HR): ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ನ 9 ಜಿಲ್ಲೆಗಳಲ್ಲಿ ವಿಧಿಸಿದ್ದ ರಾತ್ರಿ ಕರ್ಫ್ಯೂ ಅವಧಿಯನ್ನು 2 ಗಂಟೆ ವಿಸ್ತರಿಸಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾರ್ವಜನಿಕರು ಕೊರೊನಾ ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು" ಎಂದರು.
"ಸರ್ಕಾರ ಜನರ ಮೇಲೆ ಕಠಿಣ ನಿಯಮಗಳನ್ನು ಸುಲಭವಾಗಿ ಏರುವುದಿಲ್ಲ. ಆದರೆ, ಜನರು ಇದಕ್ಕೆ ಆಸ್ಪದ ನೀಡಬಾರದು. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು" ಎಂದು ಮನವಿ ಮಾಡಿದ್ದಾರೆ.
ಇನ್ನು ಮುಂದಿನ ಎರಡು ದಿನಗಳಲ್ಲಿ ತಜ್ಞರೊಂದಿಗೆ ಚರ್ಚಿಸಿ ಸಭೆ ಸಮಾರಂಭಗಳ ಮೇಲೆ ನಿರ್ಬಂಧಗಳು ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಪ್ರಕಟಿಸಲಾಗುವುದು" ಎಂದು ತಿಳಿಸಿದ್ದಾರೆ.