ಮಳಪ್ಪುರಂ, ಮಾ.18 (DaijiworldNews/PY): "ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಸರ್ಕಾರ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಳಪ್ಪುರಂನಲ್ಲಿ ಚುನಾವಣಾ ಪ್ರಚಾರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ವಿಚಾರದ ಬಗ್ಗೆ ಸುಪ್ರೀಂ ತೀರ್ಪು ಪ್ರಕಟವಾದ ನಂತರ ಭಿನ್ನಾಭಿಪ್ರಾಯ ಹೊಂದಿರುವವರ ಜೊತೆಗೆ ಸರ್ಕಾರ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ" ಎಂದಿದ್ದಾರೆ.
"ಶಬರಿಮಲೆ ವಿಚಾರದ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ವಿಧಾನಸಭಾ ಚುನಾವಣೆ ಬಂದಿರುವ ಕಾರಣ ಕೆಲ ಮಂದಿಗೆ ದೇವಸ್ಥಾನದ ಬಗ್ಗೆ ಆಸಕ್ತಿ ಉಂಟಾಗಿದೆ. ಆದರೆ, ದೇವಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಅದು ಇರುವಂತೆ ನೋಡಬೇಕಿದೆ" ಎಂದು ತಿಳಿಸಿದ್ದಾರೆ.
"ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ತೀರ್ಮಾನ ಕೈಗೊಂಡಿತ್ತು. ಬಳಿಕ ಅದು ಕೆಲವು ರಿಯಾಯಿತಿಗಳನ್ನು ನೀಡಿತ್ತು. ಈ ಬಗ್ಗೆ ಸುಪ್ರೀಂ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಬೇಕಿದೆ" ಎಂದಿದ್ದಾರೆ.
ಎಡಪಕ್ಷವನ್ನು ಸೋಲಿಸುವ ಸಲುವಾಗಿ ಯುಡಿಎಫ್ನೊಂದಿಗೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿಯ ಒ ರಾಜಗೋಪಾಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಒಪ್ಪಂದ ಮಾಡಿಕೊಂಡ ವಿಚಾರದ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದು, ಕಾಂಗ್ರೆಸ್ ಇದರಿಂದ ನಾಚಿಕೆಯಾಗಬೇಕು" ಎಂದು ತಿಳಿಸಿದ್ದಾರೆ.