ನವದೆಹಲಿ, ಮಾ.18 (DaijiworldNews/PY): ಭಾರತ ಹಾಗೂ ಚೀನಾ ನಡುವೆ ಲಡಾಖ್ ಗಡಿಯಲ್ಲಿ ವಿವಾದವಾಗಿದ್ದರೂ ಕೂಡಾ ಭಾರತ-ಚೀನಾ ನಡುವಿನ ವಹಿವಾಟಿಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಪ್ರಶ್ನೆಗೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹರ್ದಿಪ್ ಸಿಂಗ್ ಪುರಿ, "2020ರ ಜನವರಿಯಿಂದ ಭಾರತವು ಚೀನಾದಿಂದ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದು, ಸುಮಾರು 58.71 ಶತಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ" ಎಂದು ತಿಳಿಸಿದ್ದಾರೆ.
"ಚೀನಾ, ಯುಎಇ, ಅಮೇರಿಕಾ, ಸೌದಿ ಅರೇಬಿಯಾ ಹಾಗೂ ಇರಾಕ್ ಮೊದಲ ಐದು ರಾಷ್ಟ್ರಗಳಾಗಿದ್ದು, ಇಲ್ಲಿಂದ ಭಾರತ ಆಮದು ಮಾಡಿಕೊಂಡಿದೆ" ಎಂದಿದ್ದಾರೆ.
ಭಾರತ ಚೀನಾದಿಂದ ಸುಮಾರು 58,71 ಬಿಲಿಯನ್ ಡಾಲರ್ ( 4.26 ಲಕ್ಷ ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು, ಸೌದಿ ಅರೇಬಿಯಾದಿಂದ 17.73 ಬಿಲಿಯನ್ ಡಾಲರ್, ಇರಾಕ್ನಿಂದ 16.26 ಬಿಲಿಯನ್ ಡಾಲರ್ ಹಾಗೂ ಯುಎಇಯಿಂದ 23.96 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.