ಬೆಂಗಳೂರು, ಮಾ.18 (DaijiworldNews/MB) : ''ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮೊದಲು ಮಾಹಿತಿ ನೀಡಿದ್ದೆ ನಾನು. ಸಿ.ಡಿ ಪ್ರಕರಣದಲ್ಲಿ ಕೈವಾಡವಿರುವ ಆ ಮಹಾನಾಯಕ ಯಾರೆಂದು ನನಗೆ ಮಾಹಿತಿಯಿದೆ'' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.
ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಈ ಸಿಡಿ ಪ್ರಕರಣದಲ್ಲಿ ಐದು ಕೋಟಿ ರೂ.ಗೆ ಡೀಲ್ ಆಗಿದೆ. ನರೇಶ್ ಗೌಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೆಸರು ಹೇಳಿದ್ದೇ ನಾನು. ಈ ಪ್ರಕರಣದ ಬಗ್ಗೆಯೂ ಮಾಹಿತಿ ನೀಡಿದ್ದು ನಾನು. ಹಾಗೆಯೇ ಈ ಪ್ರಕರಣದ ಮಹಾನಾಯಕ ಯಾರೆಂದು ಕೂಡಾ ನನಗೆ ತಿಳಿದಿದೆ'' ಎಂದು ಹೇಳಿದರು.
''ರಾಜ್ಯದ ಜನರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ನಾನು ಸುಮ್ಮನಿದ್ದೇನೆ. ಅವರು ಫೋಟೋಗಳನ್ನು ಹಾಕಿಕೊಂಡು ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ. ನನ್ನ ಜೊತೆ ಪ್ರತಿದಿನ ಒಂದೂವರೆ ಸಾವಿರ ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಫೋಟೋ ತೆಗೆಸಿಕೊಳ್ಳುವವರು ಯಾರು ಏನು ಎಂದು ನಮಗೆ ಹೇಗೆ ತಿಳಿಯುತ್ತದೆ'' ಎಂದು ಹೇಳಿದರು.
''ಐಎಂಎ ಕೇಸ್ನಲ್ಲಿ ಆ ವ್ಯಕ್ತಿ ಯಾರು ಎಂದು ನನಗೆ ತಿಳಿದಿರಲಿಲ್ಲ. ಆದರೂ ನನ್ನ ಮೇಲೆ ಫೋಟೋ ವಿಚಾರದಲ್ಲೇ ಆರೋಪ ಕೇಳಿಬಂದಿತ್ತು. ಬರೀ ಫೋಟೋ ಹಿಡಿದುಕೊಂಡು ಆರೋಪ, ಪ್ರತ್ಯಾರೋಪ ಮಾಡುವುದು ಸರಿಯಲ್ಲ. ನಾನು ರೋಷನ್ ಬೇಗ್ ಒತ್ತಾಯ ಮಾಡಿದರೆಂದು ಇಫ್ತಾರ್ ಕೂಟಕ್ಕೆ ಹೋಗಿ ಐದು ನಿಮಿಷ ಕೂತು ಒಂದು ಬಾದಾಮಿ ತಿಂದು ಬಂದಿದ್ದೆ ಅಷ್ಟೇ. ಆದರೆ ಬಿಜೆಪಿಯವರು ನಾನು ಬಿರಿಯಾನಿ ತಿಂದು ಬಂದಿದ್ದೆ ಎಂದು ಸುದ್ದಿ ಹಬ್ಬಿಸಿದ್ದರು'' ಎಂದು ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು, ''ಐಎಂಎ ಕೇಸ್ನ ವ್ಯಕ್ತಿಯೇ ಪ್ರಧಾನಿ ಮೋದಿ ಅವರಿಂದ ಬೆಸ್ಟ್ ಟ್ಯಾಕ್ಸ್ ಪೇಯರ್ ಎಂದು ಸನ್ಮಾನಿಸಿಕೊಂಡಿದ್ದ ಫೋಟೋ ಹಾಕಿಕೊಂಡಿದ್ದ. ಅದರ ಬಗ್ಗೆ ಯಾರು ಮಾತನಾಡುವವರೇ ಇಲ್ಲ. ಬೇರೆ ಫೋಟೋಗಳನ್ನು ಭಾರೀ ಹಂಚಿಕೊಳ್ಳುತ್ತಾರೆ'' ಎಂದು ಸಿಡಿಮಿಡಿಗೊಂಡರು.
''ಪ್ರಸ್ತುತ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಸಿ ವರದಿ ನೀಡಬೇಕು. ಎಸ್ಐಟಿಯವರು ಯಾರಿಗೂ ಅಂಜದೆ ಸತ್ಯವನ್ನು ರಾಜ್ಯದ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು'' ಎಂದು ಹೇಳಿದರು.