ನವದೆಹಲಿ, ಮಾ.18 (DaijiworldNews/HR): ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ನೀಡಬೇಕು" ಎಂದು ಕೇಂದ್ರಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಪ್ರತಿಭಟನಾ ಸ್ಥಳಗಳಲ್ಲಿ ನಾವು ಕೊರೊನಾ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡಿರುವ ರೈತರಿಗೆ ಸರ್ಕಾರವು ಲಸಿಕೆ ನೀಡಬೇಕು. ನಾನು ಕೂಡ ಲಸಿಕೆ ಪಡೆಯುತ್ತೇನೆ" ಎಂದರು.
ಇನ್ನು ಕೊರೊನಾ ಭಯದಿಂದ ನಾವು ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ. ದೈಹಿಕ ಅಂತರ ಕಾಪಾಡಲು ಡೇರೆಗಳ ಗಾತ್ರವನ್ನು ಹೆಚ್ಚಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಹೋರಾಟವನ್ನು ಮುಂದುವರೆಸಲಿದ್ದೇವೆ" ಎಂದು ಹೇಳಿದ್ದಾರೆ.