ಬೆಂಗಳೂರು, ಮಾ.18 (DaijiworldNews/PY): ಮಾರ್ಚ್ 19ರಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ನಗರಕ್ಕೆ ಆಗಮಿಸಲಿದ್ದು, ಮಾರ್ಚ್ 20ರಂದು ಪಕ್ಷದ ಪ್ರಮುಖ ನಾಯಕರ ಸಭೆ ನಡೆಯಲಿದೆ.
ಮೂರು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದ್ದು, ರಾಜ್ಯದಲ್ಲಿ ಪಕ್ಷದ ವಿದ್ಯಾಮಾನಗಳ ವಿಚಾರದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರುಣ್ ಸಿಂಗ್ ಅವರು ಮಾರ್ಚ್ 19ರಂದು ಸಂಜೆ 6 ಗಂಟೆಗೆ ನಗರಕ್ಕೆ ಆಗಮಿಸಲಿದ್ದು, ಬಳಿಕ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಮಾರ್ಚ್ 20ರ ಬೆಳಗ್ಗೆ 8.30ಕ್ಕೆ ಪ್ರಮುಖ ನಾಯಕರ ಜೊತೆ ಅರುಣ್ ಸಿಂಗ್ ಸಭೆ ನಡೆಸಲಿದ್ದಾರೆ. ಸಭೆಯ ಮುಗಿದ ನಂತರ ಅವರು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದಾರೆ.