ಕೊಲ್ಕತ್ತಾ, ಮಾ.18 (DaijiworldNews/MB) : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿರಯವ ನಡುವೆ ಪಶ್ಚಿತ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ವಾಕ್ಸಮರ ಇನ್ನಷ್ಟು ಅಧಿಕವಾಗಿದೆ. ಈ ಹಿಂದೆ ಪ್ರಚಾರದ ವೇಳೆ ಆಟ ಶುರು ಎಂದಿದ್ದ ದೀದಿಗೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ''ನಿಮ್ಮ ಆಟವೀಗ ಅಂತ್ಯವಾಗಲಿದೆ. ಬಿಜೆಪಿಯ ವಿಕಾಸದ ಆಟ ಆರಂಭವಾಗಲಿದೆ'' ಎಂದು ಹೇಳಿದ್ದಾರೆ.
ಪುರ್ಲಿಯಾದಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ''ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಮತಾ ಬ್ಯಾನರ್ಜಿ ಆಟ ಶುರು (ಖೇಲ್ ಹೊಬೆ) ಎಂದು ಹೇಳಿದ್ದಾರೆ. ಬಿಜೆಪಿ ವಿಕಾಸ ಶುರು (ವಿಕಾಸ್ ಹೊಬೆ) ಎಂದು ಹೇಳುತ್ತದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಆಸ್ಪತ್ರೆಗಳು, ಶಾಲೆಗಳು ಇರಲಿವೆ'' ಎಂದು ಹೇಳಿದರು.
''ಮಮತಾ ದೀದಿ ಖೇಲ್ ಹುಬೆ ಅಂದರೆ ಬಿಜೆಪಿ ಉದ್ಯೋಗ, ಶಿಕ್ಷಣ , ಅಭಿವೃದ್ಧಿ, ಮಹಿಳೆಯರ ಕಲ್ಯಾಣ, ಪ್ರತೀ ಮನೆಗೆ ಶುದ್ಧ ನೀರು ಎಂದು ಬಿಜೆಪಿ ಹೇಳುತ್ತದೆ. ದಲಿತರು, ಆದಿವಾಸಿಗಳು ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ಆಳ್ವಿಕೆ ಮಾಡಿದ ಎಡಪಕ್ಷಗಳು, ತದನಂತರ ಬಂದ ಟಿಎಂಸಿ ಸರ್ಕಾರ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ'' ಎಂದು ದೂರಿದರು.
''ಟಿಎಂಸಿ ಸರ್ಕಾರ ನಡೆಸುವ ಬದಲು ತನ್ನ ಸ್ವಂತ ಆಟದಲ್ಲಿ ಬ್ಯುಸಿಯಾಗಿದೆ. ನೀವು ದುರ್ಗಾ ಮಾತೆಯ ಆಶೀರ್ವಾದದಿಂದಲೇ ಸೋಲುವಿರಿ'' ಎಂದು ಹೇಳಿದ ಪ್ರಧಾನಿ ಅವರು, ''ಕೇಂದ್ರ ಸರ್ಕಾರ ಅನುದಾನ ನೀಡಿದರೂ ನೀವು ಕಮಿಷನ್ ದಂಧೆ ನಡೆಸುತ್ತಿದ್ದೀರಿ'' ದೀದಿ ಸರ್ಕಾರದ ಮೇಲೆ ಆರೋಪ ಮಾಡಿದರು.
''ಭಗವಾನ್ ರಾಮ್ ಮತ್ತು ಸೀತಾ ದೇವಿಯ ವನವಾಸಕ್ಕೆ ಸಾಕ್ಷಿಯಾದ ಭೂಮಿ ಇದು. ಇಲ್ಲಿ ಸೀತಾಕುಂಡ್ ಇದೆ. ಸೀತಾ ದೇವಿಗೆ ಬಾಯಾರಿಕೆಯಾಗಿದ್ದಾಗ, ಶ್ರೀ ರಾಮ ಬಾಣ ಹೊಡೆಯುವ ಮೂಲಕ ನೆಲದಿಂದ ನೀರು ಪಡೆದರು ಎಂದು ಹೇಳಲಾಗುತ್ತದೆ. ಅಂತಹ ಇತಿಹಾಸವಿರುವ ಪುರುಲಿಯಾ ಇಂದು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವುದು ಎಂದರೆ ವಿಪರ್ಯಾಸ ಎಂದು ಹೇಳಿದ ಪ್ರಧಾನಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು'' ಎಂದು ಹೇಳಿದರು.
''ಯಾವಾಗ ದೀದಿಗೆ ಗಾಯವಾಯ್ತು? ಆದಷ್ಟು ಬೇಗ ಗುಣಮುಖರಾಗಿ ಬರಲಿ'' ಎಂದು ಕೂಡಾ ಇದೇ ವೇಳೆ ಹೇಳಿದರು.