ಚೆನ್ನೈ, ಮಾ.18 (DaijiworldNews/PY): ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಒಂದು ದಿನವಷ್ಟೇ ಬಾಕಿ ಇದೆ. ಈ ಮಧ್ಯೆ ಪಕ್ಷೇತರ ಅಭ್ಯರ್ಥಿಯೋರ್ವ ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ಬಂದಿದ್ದು, ಕ್ಷೇತ್ರದ ಜನರನ್ನು ತನ್ನತ ಸೆಳೆಯುವ ಸಲುವಾಗಿ ವ್ಯಕ್ತಿ ಕಲ್ಲಂಗಡಿ ಹೊತ್ತುಕೊಂಡು ಬಂದಿರುವುದಾಗಿ ಹೇಳಿದ್ದಾನೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಮಪತ್ರ ಸಲ್ಲಿಸಲು ಕಲ್ಲಂಗಡಿ ಹಣ್ಣಿನೊಂದಿಗೆ ಬಂದಿದ್ದೇನೆ. ಕಲ್ಲಂಗಡಿ ಹಣ್ಣು ನನ್ನ ಪಕ್ಷದ ಚಿಹ್ನೆ. ನಾನು ಈ ಒಂದೇ ಚಿಹ್ನೆಯನ್ನು ಬಳಸಿಕೊಂಡು ನಾಲ್ಕನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಪಕ್ಷಗಳು ಕೇವಲ ಬದಲಾವಣೆ ಮಾಡುತ್ತೇವೆ ಎಂದು ಭರವಸೆ ಮಾತ್ರ ನೀಡುತ್ತದೆ. ರಾಜಕಾರಣಿಗಳು ಹಾಗೂ ಸಿನಿಮಾ ನಟರಲ್ಲಿ ಯಾವುದೇ ಬದಲಾವಣೆಯನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮಂತ ಜನರಿಗೆ ಅವಕಾಶ ನೀಡಬೇಕು" ಎಂದು ತಿಳಿಸಿದ್ದಾರೆ.
"ಚುನಾವಣೆ ಪ್ರಚಾರ ನಡೆಸಲು ನನ್ನ ಬಳಿ ಹಣವಿಲ್ಲ. ನಾನು ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ 100 ಮಂತ ಬಂದಿತ್ತು. ಎರಡನೇ ಚುನಾವಣೆಯಲ್ಲಿ 400 ಮತ ಬಂದಿತ್ತು. ಆದರೆ, ಈ ಬಾರಿ ಹತ್ತು ಸಾವಿರ ಮತ ಪಡೆಯುತ್ತೇನೆ ಎನ್ನುವ ಭರವಸೆ ಇದೆ. ಜನರು ನನಗೆ ಬೆಂಬಲ ನೀಡಿದರೆ ನಾನು ಗೆಲ್ಲುತ್ತೇನೆ" ಎಂದು ಹೇಳಿದ್ದಾರೆ.