ನವದೆಹಲಿ, ಮಾ.18 (DaijiworldNews/MB) : ಕೊರೊನಾ ಸಾಂಕ್ರಾಮಿಕ ತಡೆಗೆ ಕೊರೊನಾ ಲಸಿಕೆ ನೀಡಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೆ ಒತ್ತಾಯಿಸುತ್ತಿದೆ. ಆದರೆ ಸಂಸತ್ತಿನಲ್ಲಿ ಮಾತನಾಡಿದ ಲೋಕಸಭಾ ಸಂಸದರೊಬ್ಬರು ಸರ್ಕಾರ ಕೊರೊನಾ ಅಭಿಯಾನಕ್ಕಾಗಿ 35,000 ಕೋಟಿ ರೂ. ವ್ಯರ್ಥ ಮಾಡಬಾರದು ಎಂದು ಹೇಳಿದ್ದಾರೆ.
ಲೋಕಸಭಾ ಸಂಸದ ಸಂಜೀವ್ ಕುಮಾರ್ ಸಿಂಗಾರಿ ಅವರು ಸಂಸತ್ತಿನಲ್ಲಿ ಮಾತನಾಡಿದ ವೇಳೆ, ''ಸರ್ಕಾರ ಕೊರೊನಾ ಲಸಿಕೆ ಅಭಿಯಾನಕ್ಕಾಗಿ 35,000 ಕೋಟಿ ರೂ.ಗಳನ್ನು ವ್ಯರ್ಥ ಮಾಡಬಾರದು. ಬದಲಾಗಿ ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಈ ಹಣವನ್ನು ಬಳಸಬೇಕು'' ಎಂದು ಮನವಿ ಮಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಲು ಸಾಧ್ಯವಿಲ್ಲದ ಕಾರಣ ಲಸಿಕೆ ಅಭಿಯಾನ ಮಾಡಿದರೆ "ಹಣ ವ್ಯರ್ಥ" ಎಂದು ವೃತ್ತಿಯಲ್ಲಿ ವೈದ್ಯರಾಗಿರುವ ಕರ್ನೂಲ್ನ ಸಂಸದ ಅಭಿಪ್ರಾಯಿಸಿದ್ದಾರೆ.
"ಈಗ ಸರ್ಕಾರವು ಕೋವಿಡ್ -19 ಲಸಿಕೆಗಾಗಿ 35,000 ಕೋಟಿ ರೂ. ಖರ್ಚು ಮಾಡಲು ಪ್ರಸ್ತಾಪಿಸುತ್ತಿದೆ, ಇದು ನನ್ನ ದೃಷ್ಟಿಯಲ್ಲಿ ಹಣ ವ್ಯರ್ಥವಾಗಿದೆ. ಕೋವಿಡ್ -19 ಲಸಿಕೆ ನಮ್ಮನ್ನು 6-9 ತಿಂಗಳುಗಳವರೆಗೆ ಮಾತ್ರ ಉಳಿಸುತ್ತದೆ, ಅದರ ನಂತರ 35,000 ಕೋಟಿ ರೂ. ವ್ಯರ್ಥವಾಗುತ್ತದೆ" ಎಂದು ಡಾ. ಸಂಜೀವ್ ಕುಮಾರ್ ಸಿಂಗಾರಿ ಲೋಕಸಭೆಯಲ್ಲಿ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದ ಮಧ್ಯೆ ಆರೋಗ್ಯ ಸಚಿವಾಲಯದ ಅನುದಾನದ ಬೇಡಿಕೆಗಳ ಕುರಿತು ಚರ್ಚೆಯಲ್ಲಿ ಅವರು ಈ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಆರ್ಥಿಕ ವರ್ಷದಲ್ಲಿ ಕೋವಿಡ್ -19 ಲಸಿಕೆಗಾಗಿ 35,000 ಕೋಟಿ ರೂ. ಮೀಸಲಿರಿಸಲಾಗುತ್ತದೆ ಎಂದು ಹೇಳಿದ್ದರು.
''ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗವು 100 ವರ್ಷಗಳಿಗೊಮ್ಮೆ ಬರುತ್ತದೆ. ಹಾಗಿರುವಾಗ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಾರದು'' ಎಂದು ಕೂಡಾ ಡಾ. ಸಂಜೀವ್ ಕುಮಾರ್ ಸಿಂಗಾರಿ ಹೇಳಿದರು.
''ಹೈದರಾಬಾದ್ನಂತಹ ಅನೇಕ ಪ್ರಮುಖ ನಗರಗಳು 60% ಸೋಂಕಿತ ಜನಸಂಖ್ಯೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಗುರುತಿಸಿರುವುದರಿಂದ, ಕೋವಿಡ್ -19 ಲಸಿಕೆಗಾಗಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ'' ಎಂದು ಅವರು ಹೇಳಿದರು.
ವಿಶೇಷವೆಂದರೆ, ಡಾ. ಸಂಜೀವ್ ಕುಮಾರ್ ಅವರ ಕುಟುಂಬದ ಆರು ಸದಸ್ಯರಿಗೆ ಕಳೆದ ಏಪ್ರಿಲ್ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.