ಚಿಕ್ಕಮಗಳೂರು, ಮಾ.18 (DaijiworldNews/MB) : ಅಜ್ಜಂಪುರ ತಾಲೂಕು ಅಂತರಘಟ್ಟೆಯ ದುರ್ಗಾಂಬ ದೇವಾಲಯದಲ್ಲಿ ಪತಿಯೊಂದಿಗೆ ತೆರಳಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಯೋಗೀಶ್, ಸಂತೋಷ್, ಮನು, ಶಿವಕುಮಾರ್, ಶಶಿಕುಮಾರ್ ಎಂದು ಗುರುತಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಅಜ್ಜಂಪುರ ಪಟ್ಟಣದ ಕೂಲಿ ಕಾರ್ಮಿಕ ಮಂಜನಾಯ್ಕ ತನ್ನ ಪತ್ನಿಯೊಂದಿಗೆ ಅಂತರಘಟ್ಟೆ ದುರ್ಗಾಂಬ ದೇವಾಲಯಕ್ಕೆ ಹೋದ ವೇಳೆ ಮಂಜನಾಯ್ಕ ಅವರ ಪತ್ನಿಯನ್ನು 6 ಮಂದಿ ಕಾಮಂಧರು ಚುಡಾಯಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಹಾಗೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪತಿ ಮಂಜನಾಯ್ಕ ಪ್ರಶ್ನಿಸಿದ ವೇಳೆ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು, ದೊಣ್ಣೆಗಳಿಂದ ಥಳಿಸಿದ್ದಾರೆ. ಈ ವೇಳೆ ಮಂಜನಾಯ್ಕ ಅವರ ಕೈಬೆರಳಿನ ಮೂಳೆ ಮುರಿದಿದೆ.
ಆರೋಪಿಗಳು ತನ್ನ ಪತಿಗೆ ಹೊಡೆಯುವುದನ್ನು ತಡೆಯುವ ಯತ್ನ ಮಾಡಿದ ಮಹಿಳೆಗೆ ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾರೆ.
ಈ ಬಗ್ಗೆ ಮಂಜನಾಯ್ಕ ದೂರು ನೀಡಿದ್ದು ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.