ಬೆಂಗಳೂರು, ಮಾ.18 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಕಿಂಗ್ ಪಿನ್-2 ಕೂಡ ಅಲ್ಲ. ದಯವಿಟ್ಟು ನನ್ನ ತೇಜೋವಧೆ ಮಾಡಬೇಡಿ ಎಂದು ಸಿಡಿ ಪ್ರಕರಣದ ಶಂಕಿತ ಭವಿತ್ ವೀಡಿಯೋವೊಂದನ್ನು ಮಾಡಿ ಅದರಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ವಿಡಿಯೋದಲ್ಲಿ ಮಾತನಾಡಿದ ಅವರು, "ಎಸ್ಐಟಿ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಿದ್ದೇನೆ. ಮತ್ತೆ ಪೊಲೀಸರು ವಿಚಾರಣೆಗೆ ಕರೆದ್ರೂ ಹಾಜರಾಗುತ್ತೇನೆ. ಆದರೆ ನಾನು ಸಿಡಿ ಪ್ರಕರಣದ ಪಾತ್ರಧಾರನಲ್ಲ. ನನ್ನ ಕುಟುಂಬಕ್ಕೆ ಸಿಡಿ ಕೇಸ್ ನಲ್ಲಿ ತಾನು ಇದ್ದೇನೆ ಎಂಬ ವಿಷಯ ಕೇಳಿ ಆಘಾತವಾಗಿದೆ ಎಂದರು.
"ನನ್ನ ತಾಯಿ ಹಾರ್ಟ್ ಪೇಷೆಂಟ್ ಆಗಿದ್ದಾರೆ. ನಾನು ಸಿಡಿ ಕೇಸ್ ನಲ್ಲಿ ಕಿಂಗ್ ಪಿನ್-2 ನಾನಲ್ಲ. ವಿಷಯ ತಿಳಿಯದೇ ನನ್ನ ತೇಜೋವಧೆ ಮಾಡಲಾಗುತ್ತಿದ್ದು, ಇಂತಹ ಹೇಳಿಕೆಯಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ. ನಾನು ತಪ್ಪಿತಸ್ಥ ಆಗಿದ್ರೆ ಓಡಿ ಹೋಗುತ್ತಿದ್ದೆ. ನಾನು ಈಗಲೂ ಓಪನ್ ಬುಕ್ ನಂತೆ ಇದ್ದೇನೆ" ಎಂದು ಹೇಳಿದ್ದಾರೆ.
ಇನ್ನು ಕೋರಮಂಗಲದ ಟೆಕ್ನಿಕಲ್ ಸೆಲ್ ಗೆ ತೆರಳಿದ ಭವಿತ್ ದೋಣಗುಡಿಕೆ ಎಸ್ಐಟಿ ತಂಡದ ಮುಂದೆ ತನಿಖೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.